ಕುಮಾರ ಪದ್ಮರಸ ವಿರಚಿತ ಸಾನಂದ ಚರಿತೆ
ಇದರ ಕರ್ತೃ ಕುಮಾರ ಪದ್ಮರಸ. ಈ ಕಾವ್ಯದ ಮತ್ತೊಂದು ಅನ್ವರ್ಥನಾಮ " ಶಿವಾದ್ವೈತಸಾಕಾರಸಿದ್ಧಾಂತ ಸಾನಂದ ಚರಿತ" ಸಂಸ್ಕೃತ ಸಾನಂದ ಚರಿತೆಯನ್ನು ರಚಿಸಿದವನು ಕೆರೆಯ ಪದ್ಮರಸ. ಈ ಸಂಸ್ಕೃತ ಕಾವ್ಯವನ್ನು ಆಧರಿಸಿ ಈತನ ಮಗನಾದ ಕುಮಾರ ಪದ್ಮರಸನು ಕನ್ನಡದಲ್ಲಿ ಸಾನಂದ ಚರಿತೆಯನ್ನು ಬರೆದಿದ್ದಾನೆ. ಈತನ ಕಾಲ ಹದಿಮೂರನೆ ಶತಮಾನದ ಕೊನೆಯ ಭಾಗ. ಈತನಿಗೆ ಪದುಮಿಗ, ಪದುಮಿದೇವ, ಪದ್ಮಿದೇವ ಎಂಬ ಪರ್ಯಾಯ ನಾಮಗಳಿವೆ. ಈ ಕವಿಯ ಪರಂಪರೆಯವರೆಲ್ಲಾ ಶ್ರುತೆ,ಸ್ಮೃತಿ, ವಿಶಾರದರು,ಚತುಶ್ಯಾಸ್ತ್ರ ಪಂಡಿತರು,ನಿತ್ಯ ಶಿವಾನುಭಾವಿಗಳು, ಪ್ರಕಾಂಡ ಪಂಡಿತರು, ಕಾಶೀವಿಶ್ವನಾಥನ ಪರಮಭಕ್ತರು.
ಮೊದಲನೆಯ ಸಂಧಿ: ಕುಸುಮ ಷಟ್ಪದಿ,
ಪರಮ ಪಂಚಾಕ್ಷರೀ
ವರಸಿದ್ಧ ಸಾನಂದ
ಚರಿತೆಯಂ ನಂದೀಶರೊರೆದರೊಲ್ದು॥ ಪ॥
ಶ್ರೀನಗಜೆಯಧಿಪ ಪಂ
ಚಾನನ ಷಡಕ್ಷರೀ
ದಾನಿ ಮದ್ಗುರುರೂಪವಿಶ್ವನಾಥಂ
ಸಾನಂದ ಚರಿತೆ ಜಗ
ದಾನಂದಚರಿತವಿದ
ನಾನೊಲ್ದು ಕೀರ್ತಿಪುದನೀವುದೆಂದು॥೧॥
ಸಾನಂದನಂ ಪೊಗಳ
ಲಾ ನಾಕಿಗಳುಮಱಿಯ
ರಾನನಂ ಸಾಸಿರದನಂತನಱಿಯಂ
ದಾನವರಿಪು ಬ್ರಹ್ಮ
ರೇನಾನುಮಱಿಯರ್ ಭ
ವಾನಿಯಣುಗಂ ನಂದಿನಾಥನಱಿವಂ॥೨॥
ಗುರುರೂಪವಿಶ್ವಪತಿ
ಧರೆಯೊಳೊಗೆದಿರ್ದಾದಿ
ಗುರುಮಲ್ಲಿಕಾರ್ಜುನಪ್ರಭುವೆನಿಸಿದಂ॥
ವರಮಹಿಮನನುಪಮಾ
ಚರಣನಖಿಳಾಗಮಾ
ಭರಣನಾ ಕಲ್ಲುಕುಱಿಕೆಯೊಳೊಪ್ಪುವಂ॥೫॥
ಹರಚಮೂವರ ಪರಮ
ವಿರಚಿತ ಶ್ಲೋಕಬಂ
ಧುರ ದೇವಭಾಷೆಯಂ ಕನ್ನಡಿಸಿದೆಂ॥
ಗುರು ಕೆಱೆಯಪದ್ಮರಸ
ವರಸೂನು ಪದುಮಿಗಂ
ಧರೆಯೊಳು ಸ್ತ್ರೀಬಾಲಸಾಧ್ಯಮಾಗೆ॥೧೦॥
ಅಂದು ಶೃತಿಗಳವಟ್ಟು
ಸಂದವು ಷಡಂಗಮವು
ಮಿಂದೀ ಕಥೋಪನಿಷದಕ್ಕೆಯಮರ್ದು॥
ಛಂದದಿಂದಳವಟ್ಟು
ಸಂದ ಷಟ್ಪದಿಗಳಿವ
ಱಂದವಂ ತಿಳಿವುದೆಮ್ಮಯ ಶರಣರು॥೧೧॥ಆ
ರಯ್ದು ಬಧರಿದಂ
ಬಾರಿಪುದು ನಾಡಾಡಿ
ನಾರಕಿ ಕುಕವಿಮಾರ್ಗವಲ್ತುವಲ್ತು॥
ಆಱಂಗವಾಱಧ್ವ
ವಾಱಕ್ಷರ ಬ್ರಹ್ಮ
ವಾಱಱರ್ಥ ಷಟ್ಪದಿಗಳಾದಿವಂ॥೧೫॥
ತರುಣನೆನ್ನಂ ನೋಡಿ
ಹಿರಿಯರೈಸುರದೆ ಸುಮ್ಮ
ನಿರಲಾಗದನಸೂಯರಮಲಗುಣರು॥
ಗಿರಿಜಾವರದ್ವೈತ
ವರಕೃತಿಯಿದಂ ನೋಡಿ
ಧರಣಿಗಱುಪುವುದು ಮೆಱೆವುದು ನಿಮ್ಮವಂ॥೧೭॥
ಏನಿಷ್ಠರ್ಗೆ ಲೋ
ಕೈಕವೇರರ್ಗಾ ಪಿ
ನಾಕಿಯಲ್ಲದೆ ಪೆಱರನಱಿಯದವರ್ಗೆ॥
ಲೌಕಿಕವಿದೂರರ್ಗೆ
ಶೂರೇಕಂಠನಣುಗರ್ಗ
ಲೌಕಿಕಮಿದಪ್ಪುದಪ್ಪುದು ತಪ್ಪದೆ॥೨೧॥
ಪರಮಮತ್ಕೃತಿ ತರಣಿ
ಕಿರಣೋದಯದೊಳು ಮುಂ
ನೆರೆದ ಭವಿತಿಮಿರವಳಿವುದು ಚಿತ್ರವೆ॥
ಶರಣಮುಖಸರಸಿರುಹ
ವರಳ್ವುದೆನಲೊಪ್ಪದೆ
ಶರಣಕವಿನಾಮ ಸಾಮ್ಯವನೀಕ್ಷಿಸೆ॥೨೨॥
ಇದು ಪುರಾಣದ ಸಾರ
ವಿದು ಶ್ರುತಿಸ್ಮೃತಿ ಯುಳುಮೆ
ಯಿದು ಶಿವಾಗಮದೊಂದು ಗೂಢಾರ್ಥವು॥
ಇದು ತತ್ತ್ವದೀಪವಿಂ
ತಿದು ಶಿವಾದ್ವೈತವಿಂ
ತಿದು ಸತ್ಪಥಪ್ರತಿಷ್ಠಾ ಪದ್ದತಿ॥೨೫॥
ನರಸಮೂಹದೊಳಿರ್ದ
ಶರಣರುನ್ನತಿಯೆಂತು
ಸುರರ ನಡುವೆಂತು ಹರಗಣನಾಥರು॥
ಹರಿಯಜರೊಳೆಮ್ಮ ಶಂ
ಕರನೆಂತದೇಳ್ಕೋಟಿ
ನೆರೆದ ಮನುಮಾಲೆಯೊಳು ಪಂಚಾಕ್ಷರಿ॥೩೫॥
ಸತಿಯರೊಳಗುಮೆ ಸರಿ
ತ್ಪತಿಗಳೊಳುಗಂಗೆ ಪ
ರ್ವತನಿಚಯದೊಳು ಮೇರು ಘನವದೆಂತು॥
ಅತಿಶಯದ ದಯೆಗಳೊಳು
ಜಿತಪುರನ ದಯೆಯೆಂತು
ಚತೆಗಳೊಳು ಶಿವಕಥನ ಮಹಿಮೆಯೆಂತು॥೩೬॥
ಪರಿಪರಿಯ ಭಕ್ತಿಗಂ
ಗುರುಭಕ್ತಿ ಪಿರಿದೆಂತು
ಗುರುಮೂರ್ತಿ ಶಿವನ ಸಾಕಾರದೊಳಗೆ॥
ಕರುಣಂಗಳೊಳಗೆ ಸ
ದ್ಗುರುಕರುಣವೆಂತಂತೆ
ನೆರೆದ ಮಂತ್ರದೊಳೆಮ್ಮ ಪಂಚಾಕ್ಷರಿ॥೩೫॥
ಕೆಡೆಮೆಟ್ಟಿ ಕರ್ಮಮುಮ
ನೊಡಮೆಟ್ಟಿ ಬೊಮ್ಮುಮ
ನೆಡೆಗಲಿಸಿ ದಾಂಟಿ ಸಂಸ್ಕೃತಿಜಲಧಿಯಂ
ಪೊಡೆವುದಿಡಿದಡಸಿ ಕಡು
ಹುಡಿಗುಟ್ಟೆ ಕಡಿದುಡಿದು
ವುಡುಗಿ ಸುಡುವುದು ದುರಿತ ಗಿರಿತರುಗಳು॥೪೦॥
ಕೆಟ್ಟಸಂಸೃತಿಯೆಂಬ
ನೆಟ್ಟೊಡಲ ದಂತಿ ಕ
ಕಟ್ಟೊಟ್ಟೈಸಲೃರ್ಗಮರಿದೆನಿಪುದಿದನು॥
ನಿಟ್ಟಿಸುವುದಟ್ಟುವುದು
ಕಟ್ಟುವುದು ಸಱಸಱನೆ
ಮೆಟ್ಟಿ ಸೀಳುವುದು ಪಂಚಾಸ್ಯಮಂತ್ರವ॥೪೧॥
ಜಣನೆಯಿಲ್ಲದನೋವಿ
ನುಣಿಸಿಗಗಿದು ಕುಣಿ
ಕುಣಿದು ಬೇವೃ ಪಾತಕರನೊರ್ಮೆಯೆ ॥
ಅಣಕದಿಂ ಗಣಪನೀ
ಯಣುವನುಚ್ಚರಿಸಿಯಾ
ತ್ರಿಣಯನ ಪುರಕ್ಕೊಯ್ದನೆಂತೆಂದೆನೆ॥೪೮॥
ಧರಣಿಯೊಳು ಮುನ್ನ ಭೂ
ಸುರ ಪೂರ್ಣವಿತ್ತನೆಂ
ದೊರೆವಡೆದವಂಗೆ ಪುರಹರನ ಭಕ್ತಿ॥
ಕರುವಿಡಿದುದೆಂಬಂತೆ
ಶರಣಜನಮುಖಕಮಲ
ತರಣಿಯೆನಲೊಗೆದ ಸಾನಂದನಂದು ॥೪೯॥
ಸಿರಿಯಂತೆ ಸುಖದಂತೆ
ಪರದಂತೆ ಗತಿಯಂತೆ
ವರಮುಕ್ತಿಯಂತಮಳಶ್ರುತಿಗಳಂತೆ ॥
ಹರನ ಸದ್ವರದಂತೆ
ಗುರುದಯೆಗಳಂತೆಮ್ಮ
ಶರಣರುನ್ನತಕೀರ್ತಿಯಂತೆಸೆದನು॥೫೦॥
ನುಡಿಗಳಂ ಶಿವಮಂತ್ರ
ದೊಡನೆ ಕಲಿತಂ ಮೆಲ್ಲ
ನಡಿಯಿಡಲು ಕಲಿತನಾದ್ಯರಪಥದೊಳು॥
ಮೃಡನ ಪ್ರಸಾದದೊಡ
ನೊಡನುಣಲ್ಕಲಿತ ಬೀ
ಳುಡೆಯೊಳುಡಕಲಿತ ಬಳೆದಂ ಮಹಿಮನು॥೫೩॥
ತನಗೆ ಜನ್ಮವ್ರತಂ
ತನುಮನೋವಚನದೊಳ
ಗನುದಿನಂ ಗಿರಿಜಿವರನನರ್ಚಿಪಂ ॥
ಧನವನವನಿಯೊಳಖಿಳ
ವನಿತನಿತುವಸ್ತುಗಳ
ನನುನಯದೆ ಬಿಟ್ಟುಳಿದ ವೈರಾಗ್ಯದಿಂ॥೫೬॥
ತಾಯನಾ ತಂದೆಯಂ
ದಾಯಾದ್ಯ ಬಂಧುಗಳ
ಮಾಯೆಯೆಂದೆಲ್ಲರುಮನುಳಿದು ತನಗೆ॥
ತಾಯಿ ತಂದೆಯು ಭಕ್ತಿ
ಯಾಯು ಗುರುಕರುಣವಾ
ದಾಯಂ ನಮಶ್ಶಿವಾಯೆಂಬುದಾಯ್ತು॥೫೭॥
ಅನುದಿನಂಗಳೊಳಿಂತು
ಮನವುಕ್ಕಿ ಲಿಂಗಕ್ಕೆ
ಘನಮಹಿಮನಾರಾಧನೆಯನೆಸಗುತಂ ॥
ವಿನುತಮತಿ ಬಗೆಗೆ ಬಂ
ದನಿತಿಪುರಿಯೊಳು ಪೊಗಳು
ತನವರತಮೀಶನಂ ನೆನೆವುತಿರ್ಪಂ॥೬೧
ಅಳವಿಯೊಳು ಶಿವಯೆಂಬ
ಕಳಕಳಸ್ವನವಾಗೆ
ಕಳವಳಿಸಿ ತನುಭಾವವಳಿದು ಕಳಿವಂ॥
ದಳದಳನೆ ಪುಳಕದಗೆ
ನುಳನಳಿಸಿ ಕಣ್ಗಳೊಳು
ಗಳಗಳನೆ ಬಾಷ್ಪಂಗಳಿಳಿದೊಗುತಿರೆ ॥೬೫॥
ತೊಡುವೆಡೆಯೊಳಿಡುವೆಡೆಯೊ
ಳುಡುವೆಡೆಯೊಳುಂಬೆಡೆಯೊ
ಳಡರ್ವ ನಿದ್ರೆಯೊಳಿಡಿದ ಸ್ವಪ್ನದೊಳಗೆ॥
ಪಡುವೆಡೆಯೊಳಿರ್ಪೆಡೆಯೊ
ಳಡಿಯನಿಡುವೆಡೆಯೊಳುಳಿ
ದೆಡೆಯೊಳಂ ಮೃಡನೋರಂತೆ ನೆನೆವಂ॥೬೬॥
ತುಷ್ಟನಾದೆನು ಏಕ
ನಿಷ್ಠೆಗೆಲೆ ಮಗನೆ ನಿ
ನ್ನಿಷ್ಟವೇನದನೊರೆವೈದೆನೆ ಶಿವಂಗೆ ॥
ಹೃಷ್ಟನಾನಂದರಸ
ದಷ್ಟವತಿಭಕ್ತಿಸುಖ
ಪುಷ್ಟನಿರದೆಱಗಿ ಪೊಗಳಲ್ತೊಡಗಿದಂ॥೭೨॥
ಎಸೆವಷ್ಟಮೂರ್ತಿಗಳ
ನೆಸಗುವಧಿಪತಿಯೆಯಾ
ಗಸದೊಱೆಪೆಱೆಯನಾಂತ ಗಗನಕೇಶ
ಶಶಿದಿನಪ ಶಿಖಿಗಳಿಂ
ದಸಮನಯನನೆ ಮಹಾ
ಪೊಸತೆನಿಪ ಮೂರ್ತಿಯದ್ಭುತಕಾಯನೆ॥೭೫॥
ಆರಿಗಿನಿತುಪಮಿಸ
ಲ್ಬಾರದತಿದುಸ್ತರಾ
ಪಾರಸಂಸಾರ ವಾರಿಧಿಯನಿದನು॥
ಮಾರಾರಿ ನಿನ್ನೊಂದು
ಕಾರುಣ್ಯನಾವೆಯಿಂ
ಸಾರಿಸುವೆ ತಡಿಗೆ ಶಂಕರನೆ ಹರನೆ॥೭೭॥
ಆರೊ ನಿನ್ನವನವಂ
ಗಾರೊ ತೊತ್ತೆನಿಪಾತ
ನಾರವಂಗಿರದೆ ಡಿಂಗರಿಗನವನೆ ॥
ಆರೊ ಭೃತ್ಯಾಂಕಿತನ
ದಾರೊ ಕಿಂಕರನೆನಿಪ
ನಾರವಂಗೆನ್ನು ನಾಳ್ಮಾಳ್ಪುದೀಶ॥೮೧॥
ಮಗ ಸ್ವಾಮಿ ಕಾರ್ತಿಕಂ
ಗೊಗೆಯದಾ ನಗಜಾತೆ
ಗಗಣಿತವೆನಿಪ್ಪ ನೇಹದಿನಪ್ಪಿದಂ ॥
ನೆಗೆಯಲುಘೇಯುಘೆ ಶಬ್ದ
ವೊಗೆಯೆ ದುಂದುಭಿ ಶಿವಂ
ಮಗುಳೆ ಮೂರ್ದ್ನಿ ಘ್ರಾಣವೆಸಗಿ ನುಡಿದಂ॥೮೮॥
ಸಾನಂದ ನಿತ್ಯನಾ
ಗೈ ನಿರಾಮಯನಾಗು
ನೀನಖಿಳದುಃಖವರ್ಜಿತನಾಗಿರೈ॥
ಈ ನಂದಿಸ್ವಾಮಿಗೆ ಸ
ಮಾನ ಗಣಪದವಿಯಂ
ನಾನಿತ್ತೆನೆನುತೆ ಮೃಡನಂದು ಕೃಪೆಯಿಂ॥೮೯॥
ಪಲವೇಕೆ ನಾನೆಲ್ಲಿ
ನೆಲಸಿರ್ಪೆ ನೀನಲ್ಲಿ
ತೊಲಗದಾಂ ನೀನೆಲ್ಲಿಯಲ್ಲಿಯಿರ್ಪೆಂ॥
ಸಲೆ ನಮ್ಮೊಳವಿಭೇದ
ದೊಲವು ಸಂದುದು ಸಂದು
ದೆಲವೊ ಸಾನಂದ ನಿನಗಿತ್ತೆನಿದುವಂ॥೯೦॥
ಸಮಶಕ್ತಿ ಸಮಬಲಂ
ಸಮವಿಭುತ್ವಂ ತನ್ನ
ಸಮಗುಣಮು ಸಮರೂಪುಗಳನಿತ್ತು ॥
ಅಮರರುಘೇಯೆನಲಿಕಾ
ಕ್ರಮದ ಶಿವಲಿಂಗದೊಳು
ಸಮಸಂದನೀಶನತ್ತಲುವಿತ್ತಲು॥೯೧॥
ಗುರುಭಕ್ತ ಕೇಳು ಶಂ
ಕರ ಕರುಣದಿಂದಿನಿತು
ವರನಿಚಯಮಂ ಪಡೆದು ಗಣನಾಯಕಂ॥
ಗುರುಲಿಂಗಪೂಜೆಯೇ
ಪರಮಸಾಧನವೆಂದು
ವಿರಚಿಸಿದನಂತರದ ನಿಯಮವನಿತಂ॥೯೨॥
ಉದಯದೊಳು ಗುರುಲಿಂಗ
ಸದಮಳದ ಪೂಜೆಗಳ
ನೊದವಿಸಿ ಶಿವಾಗಮಾಖ್ಯಾನಂಗಳಂ ॥
ಪದೆದು ಕೇಳ್ದೀ ತೆಱದಿ
ಪದುಳದಿಂ ಪಗಲಾಗೆ
ಮದನರಿಪುವರ್ಚನೆಯ ಸಮನಂತರಂ॥೯೩॥
ಮಾರಾರಿಯವರಿಗೊಲಿ
ದಾರೋಗಿಸಲ್ಕೀವ
ನಾರಾಧಿಸುವನಮಳವಸ್ತುಗಳುಮಂ॥
ಸೀರೆಯಂ ರತ್ನಭಂ
ಡಾರವನುಲೇಪನಾ
ಗಾರವಂ ಸಿಂಗರವನಿತ್ತು ತಣಿಯಂ॥೯೫॥
ಇದು ನಂದಿನಾಥೇಶ
ಗದಿತವಾನಂದೈಕ
ದೈದಧಿ ಸಾನಂದಾಖ್ಯಚರಿತೆಯೊಳಗೆ॥
ಮುದದಿಂದೆ ಶರಣಕವಿ
ಪದೆದು ಕನ್ನಡಿಸಿದೀ
ಮೊದಲ ಸಂಧಿಯೆ ಭಕ್ತಿಗಿದೈವೆ ಸಂಧಿ॥೯೭॥
ಎಂಟನೆಯ ಸಂಧಿ: ಭಾಮಿನೀ ಷಟ್ಪದಿ,
ಘೋರತರ ಯಾತನೆಯೊಳಳುರ್ವ ಸು
ದಾರುಣರ್ ನಾರಕಿಗಳಂ ಮಾ
ರಾರಿಪುರದೊಳುನೆರಪಿದಂ ಸಾನಂದಗಣವರನು॥ಪ॥
ಶ್ರೀ ಭವಾನೀಧವ ಸರೋರುಹ
ನಾಭ ನಯನಾರ್ಚಿತ ಪದಾಬ್ಜನಿ
ಜಾಭಿರಾಮ ಸುನಾಮ ಸೋಮಾಭರಣ ಕಾಮಹರ॥
ಶ್ರೀಭಸಿತ ವಿಲಸಿತ ಸಿತಾಂಗಮ
ಹಾವಭಾವಾಂಬುಧಿ ಬಾಡಬಾಖ್ಯವ
ರಾಭಯದ ಕರ ಕರುಣಿ ಶಂಕರ ಕರುಣಿಸೈವುದೆನಗೆ॥೧॥
ಸರಸಿರುಹಸಖನಣುಗ ಕೇಳಾ
ಪರಮಶಿವಧರ್ಮೋತ್ತರದೊಳಾಂ
ಪರಿವಿಡಿಯೊಳಾಲಿಸಿದ ಮಾಳ್ಕೆಯನಱಿ ಕ್ರಮದಿಂದೆ॥
ಅರಸು ನರಕಗಳಿವು ಚಮೂವರ
ನರಕಮಿವು ನಾಯಕನರಕಮಿವು
ಪರಿವಾರ ನರಕಮಿವುಮಿವಱೊಳು ನವೆವರಿವರೆಂದು ॥೫॥
ಎನೆ ಕರುಣಿಸನುಪಮ ಹಸಾದಂ
ಎನಲಘನೊಡ್ಡೋಲಗಂ ಬೆರ
ಸನಿಮಿಷರು ಪೂಮಳೆಗಱೆಯಲಿರ್ದಂ ಮಹಾಕರುಣಿ॥
ತನತನಗೆ ಯಮಲೋಕವಂಜು
ತ್ತನುನಯದೆ ಕೌತುಕವಿದೇನೇ
ನೆನುತ ದೂತರು ಭೀತರಾಗುತಲೋಡಲಾ ಪೊತ್ತು॥೬॥
ಶಿರವನರಿವರು ಕರುಳನುಗಿವರು
ಬರಿಯೆಲುವನುಚ್ಚವರುಕೊರಲ್ಗಳ
ನಿರದೆ ಬಿಗಿವರು ತೊರಳೆಯಂ ಸುಗಿದೊಟ್ಟುವರು ತೆಗೆದು॥
ನರವನೆತ್ತುವರಿಡಿವರಡಿಗಡಿ
ಗುರ ಕಪೋಲ ಕಪಾಲ ಕಟಿಕೂ
ರ್ಪರ ತ್ರಿಕಾದಿಯನಲ್ಲಿ ದೂತರು ಪಾತಕಾದಿಗಳು॥೧೧॥
ಕೊಱೆವ ಕುತ್ತುವ ಮುತ್ತುವೊತ್ತುವ
ಹಱಿವ ಹಿಕ್ಕುವ ಮುಕ್ಕುವೊಕ್ಕುವ
ಮುಱಿವ ಮೋದುವ ಸೇದೈವೈದುವ ಬಯ್ದು ಬಗ್ಗಿಸುವ॥
ತಱಿವ ಕೆತ್ತುವ ತತ್ತುವೆತ್ತುವ
ಪೊಱೆವ ವುಚ್ಚುವ ಚುಚ್ಚುವ ವೆಚ್ಚುವ
ಜಱಿವ ಹಱಿದುಱೆ ಕಿಱಿಕಿಱಿದನರಿದರಿದು ಸಣ್ಣಿಸುವ॥೧೨॥
ಮಸೆದು ಮುಮ್ಮೊನೆಯಾದ ಲೋಹದ
ದಸಿಯನಗ್ನಿಯೊಳಿಕ್ಕಿ ಕಾಯಿಸಿ
ಮಸಗಿ ಪಾಪರ ಕಿವಿಯೊಳಿರ್ಮೊನೆ ಮೊಳೆಯಲುಱೆ ನಾಂಟಿ॥
ಅಸದಳಂ ಕೊಡತಿಯೊಳಡಸಿ ಕುಸಿ
ಕುಸಿದು ಮೋದುತ್ತುಸುರದಿರಿಮೆಂ
ದೊಸರ್ವ ಲೋಹಾದಿಗಳ ರಸವೆಱೆದೆಱೆದು ಬಿಡದಲ್ಲಿ॥೧೯॥
ಕರಮೆಸೆಯೆ ಮಸೆದಿಕ್ಕಿ ಕಿಚ್ಚಿಂ
ಕರಗುವಂತಿರೆ ಕಾಸಿದುಕ್ಕಿನ
ಕರಗಸಂ ನೇಗಿಲುಗಳಿಂ ಕೂರಿಹ ಕುರುಜೆಗೆಗಳಿಂ॥
ಗಱಗಱನೆ ಕೊಱೆಕೊಱೆವುತುಳ್ತು
ಳ್ತೊಱಲಲೊಱಲಲು ಸಱಸಱನೆ ಸೀ
ಳ್ದಱವಗೆಗಳಾ ನಾಲಗೆಗಳಂತಲ್ಲಿ ಸುತ್ತಿರಲು॥೨೦॥
ಗುರುವೆ ಕೇಳೀ ಪಾತಕರ್ಕಳ
ನೆರೆದ ಜನ್ಮವನಂತದೊಳಗೊಂ
ದಱೊಳಗೊಮ್ಮೆ ನಮಶ್ಶಿವಾಯಾಯೆಂದಱಿಯರಯ್ಯೊ॥
ಪರರ ನುಡಿಯಂ ಕೇಳಿಯಱಿಯದ
ರುರುತರದ ಪಾಪಾತ್ಮರೆನಿಪೀ
ನರರ ದುಷ್ಕೃತ ಕರ್ಮವೃತ್ತಾಂತರವಿದೆಂದೆನುತಂ॥೨೮॥
ಕೂಡೆ ದಶಭುಜರಾದರೆಲ್ಲರು
ಕೂಡೆ ಪಂಚಾನನರೆನಿಸಿದರು
ಕೂಡೆ ನೋಡ ತ್ರಿಪಂಚಲೋಚನರೆನಿಸಿದರೈಮವರೆ ॥
ಕೂಡೆ ಶೂಲಾಯುಧರು ಶಿವಶಿವ
ಕೂಡೆ ಹರಿನಯನಾಂಘ್ರಿಯುಗಳರು
ಕೂಡೆ ಯಜಶಿರಕರರೆನಿಸಿಯಿರೆ ಯಮನಿದಿರೊಳವರು॥೪೯॥
ನೋಡಿ ಯಮನಲ್ಲಳ್ಕಿರಲು ನಡೆ
ನೋಡಿ ಮುತ್ಯುಸಮೇತರಲ್ಲಿರ
ದೋಡೆ ದೂತರ್ಗೀತರಂತಕಬೊಂತಕ ಪ್ರತತಿ॥
ನೋಡೆ ನರಕವದೃಶ್ಯವಾಯ್ತುರೆ
ಕೂಡೆ ಶಿವಮಯವಾಗಲಿಳೆ ನಲಿ
ದಾಡೆ ರುದ್ರರು ರುದ್ರಕನ್ನೆಯರಲ್ಲದಿಲ್ಲೆನಿಸಿ॥೫೦॥
ಕೆಡದು ಬೀಳುತ್ತೇಳುತೋಡುತ
ಬಿಡುತ ಬಾಯ್ಗಳನಂತಕರುಗಳು
ಕಡೆಯದಿನವಾಯ್ತೆಮಗೆನುತ್ತಡಿಗಡಿಗೆ ದೆಸೆಗೆಡೆದು॥ ೫೧॥
ಬಗಿದು ಬಗಿದಾಗಸವದೊರ್ಮೆಯೆ
ಮಿಗೆ ಬಯವ ಬಱಿದಾಗೆ ಪುಷ್ಪಕ
ಮೊಗೆದವಾ ರುದ್ರಾಂಗನಾ ಚೋದಿತವಸಂಖ್ಯಾತಂ॥
ನೆಗೆವ ಪಂಚಮಹಾಸ್ವನವನುಱೆ
ತೆಗೆವ ವುಘೆವುಘೆ ಶಬ್ದವಂತ
ಲ್ಲುಗುವ ಪೂಮಳೆವೆರಸು ಗಳಗಳನಿಳಿದಿಳಿದು ಬಂದು॥೫೨॥
ಕೂಡಿದರು ಸಾಮೀಪ್ಯ ಪದವಿಯೊ
ಳಾಡಿದರು ಗಣನಾಥರೊಳು ಸಲೆ
ಹಾಡಿದರು ಸಾನಂದನಂಕಿತದಂಕಮಾಲೆಯುಮಂ॥
ನೋಡು ರುದ್ರಾಂಗನೆವೆಸರುಮಿವು
ರೂಢಿ ಮೋಕ್ಷಾಂಗನೆಯರೆಂದಱಿ
ಗಾಡಿಕಾರ್ತಿಯರೊಳು ಶಿವೃನಂದಾತ್ಮರೆನಿಸಿರಲು॥೫೫॥
ಬಾಡಿದಂ ಬಾಯಾಱಿ ಮುಖವಿ
ರ್ಪೋಡಿದಂ ಯಮನಂದು ಶಿವಶಿವ
ಪಾಡಳಿದ ನಿಜಸಿರಿಯ ಹಾನಿಗೆ ಮಲಮಲನೆ ಮಱುಗಿ॥
ರೂಢಿಯಂ ಸಾನಂದದೇವನ
ಗಾಡಿಯಂ ಸಂಪದವನೆಲೆ ನಡೆ
ನೋಡಿಯಿಂತೆಂದಂ ಮಹಾತ್ಮಯಿದೇನನೆಸಗಿದಿರಿ ॥೭೮॥
ದೇವಪಿತೃ ಮಾತಾಭಿಘಾತರು
ದೇವಸತಿಸುತ ಮಿತ್ರಘಾತರು
ದೇವಪತಿ ಶರಣಾಗತಾರ್ಥರು ಗುರುವಿಘಾತಕರು॥
ದೇವ ಶೈವಾಚಾರಘಾತರು
ದೇವಶ್ರೀಭಸಿತಾಂಗಘಾತರು
ದೇವ ಶಿಶುಗೋಬ್ರಹ್ಮಹಾ ಮಾತಾಗಮನರತರು॥೮೦॥
ನೋಡಲಿವರ್ಗೆ ಗಣತ್ವಮಂ ಸಲೆ
ರೂಢಿಯೊಳು ಸಲಿಸಿದಿರಿ ಶಿವ ಶಿವ
ನೋಡಿದಡೆ ಮರುಳರವೊಲಿದಿರೆ ಪುರಹರಂಗರಿದು॥
ಸೂಡಿ ಮಂಗಲವೆಸಗಿದಿರಿ ನಿ
ರ್ಜೋಡನೆನ್ನಧಿಕಾರಕಕ್ಕಟ
ಮಾಡಿದಿರಿ ಕೂಡಿದಿರಿ ಪ್ರಳಯವನೇವೆನೆನಗೆನುತಂ॥೮೧॥
ನಿರಯಕೆರಡೇ ಪಗೆಗಳೆಂದುಂ
ಶರಣರು ಪಂಚಾಕ್ಷರಿಯುಮೆಂ
ದೊರೆದ ವೃದ್ಧಾಪ್ತಾಖ್ಯವಾಕ್ಯವನೆಣಿಸಿರುಳುಪಗಲುಂ॥
ಎರಡುಯೆರಡೆಂದಂಜಲಂಜಲು
ಯೆರಡಱಿಂ ಕೇಡಾಯ್ತು ತಪ್ಪದೆ
ಪರಿಕಿಸಲುವಾನಾರ್ಗೆ ಬಾಳ್ತೆಗವಿನ್ನೆನುತ ಮತ್ತೆ॥೮೨॥
ಶರಣನೀಕ್ಷಣೆಯಿಂದೆ ಮುನ್ನವೆ
ನಿರುತವಲ್ಲಿಂದಂ ಬಳಿಕ್ಕವೊ
ನರಕಿಗಳು ಪ್ರಮಥರ್ಕಳಾಗಿರ್ದೊಂದು ಚಿತ್ರವಿದು॥
ಹರವಿಮಾನಾಗಮನವುಂ ಪುರ
ಹರನಪುರ ವೊಗೆವಂದು ಬೇಗಮು
ಮರರೆ ಠೌಳಿಯ ವಿದ್ಯೆಯೋ ಮಾಹೇಂದ್ರಜಾಲವಿದೊ॥೯೧॥
ಚಿತ್ರಗುಪ್ತಯಿದೇನು ಕೌತುಕ
ವತ್ತ ಸಾನಂದೇಶನೆಸಗಿತು
ಕೃತ್ರಿಮವೊವಿದಕೃತಿಮವೊ ಕಣ್ಮಾಯವೋ ಮೇಣು॥
ಚಿತ್ರವೋಯೆಂಬೊಂದು ಭ್ರಮೆಯತಿ
ಚಿತ್ರಯಿನ್ನೂಮನದೊಳಿದೆಯಲೇ
ಕೃತ್ಯವೀಘನವೃರ್ಗೆ ಮತ್ತಿನ್ನೆಣಿಪೊಡಿನ್ನಾರ್ಗೆ॥೯೨॥
ಪುರದ ಬಾಗಿಲ ಬೀಯಗಂಗಳ
ನಿರದೆ ನಿರಯದ ದಂಡಮುದ್ರೆಯ
ನಿರಿಸಿದೆಲ್ಲಾ ಸೀವಡಿಯಂ ತ್ರಿಕರಣ ಮೊದಲಿಗರಂ॥
ಬರಲು ತನ್ನೊಡವೇಳಿ ಮಿಕ್ಕಿನ
ಪರಿಜನವನಾಪುರಕೆ ಕಾಪಾ
ಗಿರಿಸಿ ಪಯಣೋದ್ಯೋಗಿಯಲ್ಲಿಂ ತಳರ್ದು ಪೊಱಮಟ್ಟು ॥೯೪॥
ಇದು ಪರಮ ನಂದೀಶರೊರೆಯಿಂ
ಪುದಿದ ಸಾನಂದೇಶಚರಿತದೊ
ಳಿದು ನರಕ ವಿಧ್ವಸ್ತಂಭವ ಸೂಚನಾಸಂಧಿ
ಪದೆದು ಪದ್ಮರಸಾಂಕನಿಂದಂ
ಗದೆಸಿದೊಳುಗನ್ನಡದೊಳೆಂಟನೆ
ಯದಿದೆ ಸಂಧಿಯಿದಾರ್ತರಾರ್ತಿಹರವೆನಿಪ ಸುಸಂಧಿ॥೯೫॥
ನೆನಕೆ:
ಕರ್ತೃ: ಕುಮಾರ ಪದ್ಮರಸ,
ಸಂಪಾದಕ: ಎಸ್. ಬಸಪ್ಪ,
ಪ್ರಕಾಶಕರು:
ಕನ್ನಡ ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾನಿಲಯ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ