ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 19, 2023

ಬಸವಕವಿ ವಿರಚಿತ ಸಿದ್ದಲಿಂಗ ಕಾವ್ಯ

 ಬಸವಕವಿ ವಿರಚಿತ ಸಿದ್ದಲಿಂಗ ಕಾವ್ಯ 


ಸಿದ್ದಲಿಂಗ ಕಾವ್ಯದ ಕರ್ತೃ ಬಸವಕವಿ.ಈತನ ಕಾಲ ಕ್ರಿ. ಶ. ೧೮೮೨ .ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಈ ಕಾವ್ಯದಲ್ಲಿ ೧೫ ಸಂಧಿ, ೪೩೮ ಪದ್ಯಗಳಿವೆ. ಕವಿ ತನ್ನ ಕಾವ್ಯವನ್ನು ಸಿದ್ದಲಿಂಗೇಂದ್ರ ಕಾವ್ಯ ಎಂದು ಹೆಸರಿಸಿದ್ದರೂ ಇಲ್ಲಿ ಸೂಳೆಕೆರೆಯ ವೃತ್ತಾಂತವಿರುವುದರಿಂದ ಐತಿಹಾಸಿಕ ಮಹತ್ವ ಪಡೆದಿದೆ. 


ಸೂಳೆಕೆರೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿದೆ.ಕರ್ನಾಟಕದ ಬಹುದೊಡ್ಡ ಕೆರೆಗಳಲ್ಲಿ ಒಂದಾದ ಈ ಕೆರೆಯ ಈಗಿನ ಹೆಸರು ಶಾಂತಿಸಾಗರ. ವೇಶ್ಯೆಯ ಅಭಿಲಾಷೆಯ ಕುರುಹಾಗಿ ಈ ಕೆರೆಗೆ ಸೂಳೆಕೆರೆ ಎಂಬ ಹೆಸರು ಬಂದಿತೆಂದು ಸಿದ್ಧಲಿಂಗೇಂದ್ರ ಕಾವ್ಯದಲ್ಲಿ ನಿರೂಪಿತವಾಗಿದೆ.  ಇಲ್ಲಿಯ ಸಿದ್ಧಲಿಂಗೇಂದ್ರ ಶಿವನ ಅವತಾರ. ಈತನ ಪತ್ನಿ ಶಾಂತವ್ವೆ ಪಾರ್ವತಿಯ ಅಂಶ. ಈಕೆ ಭೂಲೋಕದ ವಿಕ್ರಮರಾಜನಿಗೆ ಮಗಳಾಗಿ ಜನಿಸಿದಳು. ಸಿದ್ಧಲಿಂಗ ಈಕೆಯನ್ನು ವಿವಾಹವಾಗಿ ರಾಜನಿಗೆ ಕೆರೆ ಕಟ್ಟಿಸಲು ಪ್ರೋತ್ಸಾಹಿಸಿದನು. ಈ ವಸ್ತುವನ್ನು ಕಾವ್ಯವಾಗಿಸುವಾಗ ಕವಿ ತನ್ನ ಕಾಲದ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳ ಮೇಲೂ ಬೆಳಕು ಚೆಲ್ಲುವುದರಿಂದ ಇದು ಸಾಂಸ್ಕೃತಿಕವಾಗಿಯೂ ಗಮನಾರ್ಹವಾಗಿದೆ.


ಸಂಧಿ- ೧ ವಾರ್ಧಕ, 


 ಶ್ರೀ ಪರಮ ಪರಶಿವಂ ಪಾರವತೀವಲ್ಲಭಂ

ಶ್ರೀಪತೀ ಸುರನಿಕರಮಂ ಕೂಡಿ ಕೈಲಾಸ 

ದಾ ಪಟ್ಟಣದೊಳಭವನೊಪ್ಪಿರ್ದನೋಲಗದೊಳತಿ ವಿಭವದಿಂ ಸುಖದೊಳು॥ಪ॥ 


ಕಂತೆ ಸಿದ್ದೇಶ್ವರಂ ಭೂತಳಕ್ಕೈತಂದು 

ಶಾಂತವ್ವೆಯಂ ಮದುವೆಯಾಗಿಮಾ ಕೆರೆಯನುರೆ 

ಸಂತೋಷದಿಂ ಕಟ್ಟಿಸಿದ ಕಥೆ ಇದನಿಶಮುಂ ಕೇಳ್ವುದೆಲ್ಲಾ ಸುಜನರು॥ 


ತಾಮರಸನೇತ್ರಾರ್ಚಿತಾಂಘ್ರಿನತ ಪೋಷಣಂ 

ವ್ಯೋಮಕುಂತಲನಮರರಾಜನುತ 

ಸ್ತೋಮ ಪರಿಪಾಲಕಂ ಪಾಪನಂ ಪಂಚಮುಖ ಪಾದಾರವಿಂದನಭವಂ ॥ 

ನಾಮೋದನಮಳತರನಜಶಿರಚ್ಛೇದನಂ 

ಪ್ರೆಮದಿಂ ಪೊರೆಗೆಮ್ಮುವಂ ಸತತಮೀಶ್ವರಂ ವೇಶ್ಯಾತಟಾಕೇಶ್ವರಂ॥೧॥


ಗಜದೈತ್ಯ ಮದಭಂಗ ಸಾಧುಸಂಚಯಸಂಗ 

ತ್ರಿಜಗವಂದಿತ ಪಾದ ಭಜಿಸುವರಿಗಾಮೋದ 

ನಿಜನೇತ್ರ ನುತಪಾತ್ರ ಶತಪತ್ರರಿಪುಭೂಷ ಭವನಾಶ ಭಕ್ತಕೋಶ॥ 

ಭುಜಗರಿಧ್ವಜಪ್ರೀತ ಭೂಮಿಪಾಲಕನಾಥ

ರಜತಗಿರಿಸಂವಾಸ ನಿಖಿಳ ಪ್ರಮಥರ ಪೋಷ 

ಗಜವದನಪಿತ ಸಲಹು ಸಂತತಂ ಭಕ್ತರಂ ವೇಶ್ಯಾತಟಾಕೇಶ್ವರ॥೨॥


 ಧರಣಿಧರ ಜಾತೆಯ ಕರಿದನ ಮಾತೆಯಂ

ಸುರವಧೂ ಪ್ರೀತೆಯಂ ಭುವನಕತಿ ಖ್ಯಾತೆಯಂ 

ಪರಮ ಶುಕವಾಣಿಯಂ ಕಲ್ಯಾಣಶ್ರೇಣಿಯಂ ಸರ್ಪಪ್ರಪೇಣೀಯನು॥ 

ಕರುಣರಸ ಪೂರೆಯಂ ಪುರವೈರಿ ಧಾರೆಯಂ 

ಸರಸಿರುಹಪಾಣಿಯಂ ಸರ್ವಜ್ಞ ಜಾಣೆಯಂ 

ವರಭಕ್ತಿಯಿಂ ತುತಿಸಿ ನಾಂ ಬೇಡ್ವೆನೀ ಕೃತಿಗೆ ಮತಿಯೊಳತಿ ಸನ್ಮತಿಯನು॥೪॥


ವಿಘ್ನಾಭ್ರವಾತನಂ ವಿಘ್ನಾಬ್ಧಿಕುಟಜನಂ

ವಿಘ್ನಾದ್ರಿವಜ್ರನಂ ವಿಘ್ನಾಂಧತಾರ್ಕನಂ 

ವಿಘ್ನೇಭಸಿಂಹನಂ ವಿಪಿನಾಶ್ರ ಈಶನಂ ವಿಘ್ನಾಹಿ ಖಗವರನನು॥ 

ವಿಘ್ನಾಬ್ಜಚಂದ್ರನಂ ವಿಘ್ನಹರಿಶರಭನಂ 

ವಿಘ್ನದ್ರು ಪರಶುವಂ ತುತಿಸಿ ನಾಂ ಭಕ್ತಿಯಿಂ 

ವಿಘ್ನಮೀ ಕೃತಿಗೆರಗದಂತೆ ನೀಂ ಮಾಡೆಂದು ವಿಘ್ನರಾಜನ ಬೇಡುವೆ॥೫॥ 


ಕರಕಮಲಸಂಭವಂ ಚರಮೂರ್ತಿ ಬಸವಕವಿ

ಗುರುಕಂತೆ ಸಿದ್ಧೇಶನೊಲುಮೆಯಿಂದಿದಕೆ ಸ 

ದ್ವರ ಸಿದ್ಧಲಿಂಗೇಂದ್ರ ಕಾವ್ಯಮೆಂಬುತ್ತಮದ ವೆಸರಿಟ್ಟು ಸಮ್ಮುದದೊಳು॥ 

ವಿರಚಿಸಿದನಿದರೊಳೇನಾದರುಂ ತಪ್ಪಿರಲ್ 

ಕರುಣದಿಂ ತಿರ್ದಿ ಸತ್ಕಾವ್ಯಮೆಂದೆನಿಸುತಂ 

ವರ ಕೋವಿದರ್ ಲೇಸಿನಿಂದಿದಂ ಹರುಷದಿಂ ಮೆರೆಸುವುದು ಭೂತಳದೊಳು॥೧೨॥


ಸುರಪಗೈಶ್ವರ್ಯಮಂ ಮುರಹರಗೆ ಪುತ್ರಿಯಂ 

ಸುರಜಾಲಕಮೃತಮಂ ಧರಣಿಜನಕಂಬುವಂ 

ಇರದಿತ್ತೆನೆಂಬುವತಿ ಹರುಷದಿಂದಾ ಶರಧಿ ಪೆಚ್ಚಿ ತಲೆಯಲ್ಲಾಡಲು॥ 

ತರಳ ಚಂದ್ರ ಬಹಳ ಕ್ಷಯರೋಗಿಯಾದನುಂ 

ವರ ಕುಂಭಸಂಭವಂ ತನುಭಂಗ ಮಾಳ್ದನುಂ 

ಉರದೊಳೌರ್ವಾಗ್ನಿಯಂ ತಾಳಿ ಚಿತೆಯೊಳಬ್ಧಿ ತಗ್ಗಿ ತಾನಿರುತಿರ್ದುದು॥೧೭॥ 


ಇಂತಪ್ಪ ಕನಕಾದ್ರಿಯಂತ್ಯದೊಳ್ ತೇಜದಿಂ 

ದಂತಕಾರಿಯಪುರಮಿದೆಂದದಂ ಪೆಸರ್ವಡೆದ 

ನಂತ ಸೌಭಾಗ್ಯದಿಂ ಕರ್ಬುರದ ಕೋಟೆಯಿಂ ರತ್ನದಾಳ್ವೇರಿಯಿಂದ ॥ 

ಸಂತತಂ ಪೀಯೂಷದಗಳಿನಿಂ ಸವೆತನಿಭ 

ದಂತೆಸೆವ ದ್ವಾರದಿಂ ಮುತ್ತುಗಳ ತೆತ್ತಿಸಿದ 

ನಂತಭಿತ್ತಿಗಳಿಂದಲೊಪ್ಪುತಿಹ ಕೈಲಾಸಮಿಂತೆಸೆದುದೇನೆಂಬೆನು॥೨೨॥ 


ಗಗನಾಗ್ರ ಮುಟ್ಟುವತಿ ಮನೆಗಳಿಂ ತೆನೆಗಳಿಂ

ಝಗಝಗಿಪ ಬುರ್ಜುಗಳ ವ್ರಾತದಿಂ ಘಾತದಿಂ 

ಬಗೆ ಬಗೆಯೊಳೊಪ್ಪುತಿಹಧ್ವಜಗಳಿಂ ವ್ರಜಗಳಿಂ ನಿಜವಾದ ತೊಲೆಕಂಬದ ॥ 

ಸಗಣದಿಂ ಚಂದ್ರನಿಭ ಶಾಂತಿಯಿಂ ಕಾಂತಿಯಿಂ 

ದಗಣಿತ ಮಹಾಕೋಟಿ ಹರಹಿನಿಂದುದ್ದದಿಂ 

ನಗೆಮೊಗದ ಚಲ್ವಿಂದೆ ಕೈಲಾಸಮೊಪ್ಪಿರ್ದುದೇನೆಂಬೆನಚ್ಚರಿಯನು॥೨೩॥


ಪರಮ ಭೃಂಗೀಶ್ವರಂ ನಾಟ್ಯಮಂ ನಟಿಸುವಂ

ಪರಮೇಷ್ಠಿ ತಾಳಮಂ ಹಾಕುವಂ ಶಾರದೆಯು 

ವರ ವೀಣೆಯಂ ನುಡಿಸೈವಳ್ ನಾರದರ್ಗೀತಮಂ ಪಾಡೆ ನಂದೀಶನು॥ 

ಮುರಜಮಂ ಬಾರಿಸುವನಿಂದ್ರ ಕನ್ನಡಿವಿಡಿಯೆ 

ವರುಣ ಗಂಗೋದಕದ ಗಿಂಡಿಯಂ ಪಿಡಿದಿರಲ್

ಮರುತ ಬಿಜ್ಜಣಿಗೆಯಂ ಬೀಸಲುಮೆಯರಸನಿಂಗೊಬ್ಬುಬ್ಬರೊಂದೊಂದನು॥೨೯॥ 


ಗುರುವರೇಣ್ಯಂ ಪರಮಲಿಂಗಾನಿಷ್ಠಾಪರಂ 

ಹರಚರಣ ಸರಸಿರುಹಷಟ್ಪದಂ ಸನ್ಮಾರ್ಗ 

ನುರುಮತ್ತಿ ಮಠದೀಶನಾರ್ಯಾಬ್ಧಿ ಚಂದ್ರಮಂ ಗುರುಚನ್ನಬಸವೇಶನ॥ 

ವರಪಾಣಿ ಸರಸಿರೈಹ ಸಂಭವಂ ಬಸವಕವಿ 

ವಿರಚಿಸಿದನೀ ಸಿದ್ಧಲಿಂಗಕಾವ್ಯಮಂ

ಹರುಷದಿಂ ಸದ್ಭಕ್ತರೊಲವಿನಿಂ ಕೇಳ್ದಿದಂ ಶಿವನಕೃಪೆಯಂ ಪಡೆವುದು॥೩೪॥ 


ಅಂತು ಸಂಧಿ ೧ ಕ್ಕಂ ಪದ೩೫ ಕ್ಕಂ ಮಂಗಳ ಮಹಾ ಶ್ರೀ, 


ಸಂಧಿ - ೨ ವಾರ್ಧಕ, 


ಪರಮ ಸಿರಿಯಿಂದಲಾ ಕರ್ಣಾಟದೇಶಮದು 

ಮಿರುತಿರಲ್ಕದರ ಮಧ್ಯದೊಳಿರುವ ಸ್ವರ್ಗವತಿ 

ಯರಸವಿಕ್ರಮನಾಳುತೊಪ್ಪಿರ್ದನಂಗನಾ ನೂತನಾದೇವಿಯೊಡನೆ॥ ಪ॥


ಧರಣಿಯಂ ಪೊತ್ತಿಹನ ಸುತೆಯರಸನಾತ್ಮಜನ

ಹಿರಿಯಣ್ಣನನಪ್ಪನಯ್ಯನ ಸುತನ ಪ್ರೀತಿಯಿಂ 

ದಿರದಾಳ್ದನಾತ್ಮಜನಮಾತೆಯಂ ಕದ್ದೊಯ್ದನನುಜಗಂ ಕಾಮಿತವನು॥ 

ಬರೆದಿತ್ತನಾತ್ಮಜನ ಶಿಷ್ಯನೊಳ್ ಪ್ರಶ್ನೆಯಂ 

ಕರುಣದಿಂ ಮಾಡಿದಗೆ ಕರಮುಗಿದು ಪೋದವನ 

ಹರುಷದಳಿಯನ ತಂದೆ ವೇಶ್ಯಾತಟಾಕೇಶಗುರುಸಿದ್ಧಲಿಂಗ ಸಲಹಾ॥೧॥ 


ಈ ರೀತಿಯಿಂ ಮೆರೆವ ಮೇರುವಿನ ದಕ್ಷಿಣಕೆ 

ತೋರುವುದು ಕರ್ಣಾಟದೇಶಮದು ವಿಭವದಿಂ

ಭೂರಿಸುಕ್ಷೇತ್ರದಿಂ ಪರಿವ ತೀರ್ಥಂಗಳಿಂ ಪುಣ್ಯಭೂಮಿಗಳಿಂದಲಿ॥ 

ಭೂರಾಜನಿಕರದಿಂ ವೇದಪೌರಾಣದಿಂ 

ಮಾರಹರಜಾತಿಯಿಂ ಜ್ಞಾನಿಗಳ ವ್ರಾತದಿಂ 

ವೀರಜನಭಯದಿಂದಮಾ ದೇಶಮೊಪ್ಪಿರ್ದುದೇನೆಂಬೆನಚ್ಚರಿಯನು॥೨॥ 


ಲಾಳ ಕೊಂಕಣ ಕೊಡಗ ಸೌರಾಷ್ಟ್ರ ಹಮ್ಮೀರ 

ಚೋಳ ಬರ್ಬರ ದ್ರವಿಡ ಕಾಂಭೋಜ ನೇಪಾಳ 

ಗೌಳ ಮಲೆಯಾಳ ಗುರ್ಜರ ಪಾಂಡ್ಯ ಬಂಗಾಳ ಮೊದಲಾದ ದೇಶಂಗಳ ॥ 

ಬಾಳುವೆಯ ನಿಕರಮಂ ಸೌಭಾಗ್ಯ ವ್ರಾತಮಂ 

ಕೋಳುಗೊಂಡಿರುವಂತೆ ಕರ್ಣಾಟದೇಶಮದು 

ಪೇಳಲೇನತುಳ ವೈಭವದಿಂದಲೊಪ್ಪುಗುಂ ಸಂತತಂ ಸಿರಿಯಿಂದಲಿ॥೩॥ 


ಎಲ್ಲೆಲ್ಲಿ ನೋಡಿದರ್ ಶಿವಲಿಂಗದಾಲಯಂ 

ಎಲ್ಲೆಲ್ಲಿ ನೋಡಿದರ್ ಸುಕ್ಷೇತ್ರ ಸಂದೋಹಂ 

ಮೆಲ್ಲೆಲ್ಲಿ ನೋಡಿದರ್ ಪರಿವ ಶುಭತೀರ್ಥಗಳೆಲ್ಲ ಠಾವಿನೊಳು॥ 

ಎಲ್ಲೆಲ್ಲಿ ನೋಡಿದರ್ ಪದುಮ ತೀವಿದ ಕೊಳಂ

ಎಲ್ಲೆಲ್ಲಿ ನೋಡಿದರ್ ಗೋವಿರುವ ಜಾಗಗಳ್

ಎಲ್ಲೆಲ್ಲಿ ನೋಡಿದರ್ ತುಂಬಿ ಇಂಬಾಗಿರ್ಪುದೇನೆಂಬೆನಾ ನಾಡೊಳು॥೪॥ 


ಕೆರೆಯು ಕಾಲುವೆ ತೋಟ ಪೂದೋಟಮರವಟಿಗೆ 

ವರ ವಾಪಿ ಖರ್ಜೂರ ಮಂದಾರ ತರುಗಳಿಂ 

ಪರಿಪರಿಯ ಪೂವ್ಗಳಿಂದಂ ಸುಛತ್ರಂಗಳಿಂ ತೆಂಗು ಪನಸಂಗಳಿಂದ॥ 

ಪರಿವ ಸುಫಳಂಗಳಿಂ ಗಿರಿಗಳಿಂ ನದಿಗಳಿಂ 

ಚರಿಪ ಪುಣ್ಯಾತ್ಮರಿಂ ಸೊಬಗಿನಿಂದಿಂಪಿನಿಂ

ವರ ಸೊಂಪಿನಿಂ ಬೆಳೆಗಳಿಂದಮಾ ಕರ್ಣಾಟದೇಶಮದು ಕಂಗೆಸೆದುದು॥೫॥ 


ಅಲ್ಲಿಪ್ಪರೆಲ್ಲ ಸತ್ಯಾತ್ಮರು ಮಹಾತ್ಮರುಂ

ಅಲ್ಲಿಪ್ಪರೆಲ್ಲ ಸಚ್ಛೀಲರುಂ ಪಾಲರುಂ 

ಅಲ್ಲಿಪ್ಪರೆಲ್ಲ ಸದ್ಧೀರರು ವೀರರು ವೀರಶೈವಾಚಾರದಿ ॥ 

ಬಲ್ಲಿದರುಮಂತಕನ ಸೊಲ್ಲಿನೊಳ್ ನೆನೆಯರುಂ 

ಅಲ್ಲಿಪ್ಪರೆಲ್ಲ ಸದ್ಭಾವಿಗಳುಮಾರ್ಯರುಂ 

ಅಲ್ಲದಾ ದೇಶದೊಳ್ ಕಾಣೆ ಕೌಚೋದ್ಯರಂ ಪರಿಭಾವಿಸುತ ನೋಡಲು॥೬॥ 


ಆ ಮಹಾ ಕರ್ನಾಟದೇಶದತಿ ಸೊಬಗಮಂ 

ತಾಮರಸಭವನಿಲ್ಲಿ ತೆಗೆದಿಟ್ಟನೆಂಬಂತೆ 

ಧಾಮನಿಧಿ ಶಶಿಕಾಂತಶಿಲೆಗಳಿಂ ರಚಿತಮಾದ ಕೋಟೆಯಾಳ್ವೇರಿಯು॥ 

ರಾಮಣೀಯಕಮಾದ ಸೌಧ ಹರ್ಮ್ಯಂಗಳಿಂ 

ಕ್ಷಾಮವ್ರಾತಂಗಳಿಂ ಶಶಿಸೂರ್ಯವೀದಿಯಿಂ 

ಜೀಮೂತವಾಹನನ ಪುರಕಧಿಕದಂತೆಸೆಯೆ ಸ್ವರ್ಗಾವತೀ ಪಟ್ಟಣಂ॥೧೩॥ 


ತರತರದ ತೆನೆಗಳಿಂ ಮನೆಗಳಿಂ ಜನಗಳಿಂ 

ತರತರದ ನೂತನದ ಗೋಪುರವ್ರಾತದಿಂ 

ತರತರದ ರತ್ನಮಯ ಭಿತ್ತಿಯಿಂ ವೇದಿಕಾನಿವಹದಿಂದಂ॥ 

ಪರರಾಯರೆದೆಗೆ ಭೀಕರಮಾದ ಶಾರ್ದೂಲ 

ವರ ಮುಖದಿಮಿರದೆತ್ತಿದಂಗಜನ ಕೈಗಳಿಂ 

ತೆರೆದ ಮಾದ್ವಾರಗಳ ನಿಕರದಿಂದಾ ನಗರಿ ಕಂಗೆಸೆದುದೇನೆಂಬೆನು॥೧೪॥ 


ಇಂತಪ್ಪ ಪುರವ ಪಾಲಿಸುವನಾ ವಸುಮತೀ 

ಕಾಂತ ವಿಕ್ರಮರಾಜನರಿರಾಜ ಗಜಸಿಂಹ 

ನಂತೆಶಭೀಕರಮಾಗಿ ಮಾರ್ತಾಂಡ ಸಮ ಕೀರ್ತಿಯುತನಾಗಿ ರೂಪಿನಲ್ಲಿ॥ 

ಕಂತುವಿನ ಸಮರೂಪನಾಗಿ ಚಂದ್ರಮನಂತೆ

ಶಾಂತಿಯುಳ್ಳವನಾಗಿ ಪಾರ್ಥನಂತಧಿಕವಿ 

ಕ್ರಾಂತಪೂರಿತನಾಗಿಯೊಪ್ಪಿರ್ದನಾ ಭೂಪನಮರೇಂದ್ರನುತ್ಸವದೊಳು॥೧೮॥ 


ಸೌರಾಷ್ಟ್ರ ಕಾಂಭೋಜ ನೇಪಾಳ ವಂಗ ಹ

ಮ್ಮೀರ ಗುರ್ಜರ ಲಾಟ ಪಂಚಾಳ ಸಿಂಧು ಸಂ 

ವೀರ ಬಂಗಾಳ ಮಾಳವ ಮಗಧ ಬರ್ಬರ ಪಾರಿಯಾತ್ರಕ ಕರ್ಪರ॥ 

ಮಾರಾಷ್ಟ್ರ ಚೋಳ ಕುಂತಳ ಗೌಳ ಭದ್ರ ಕಾ 

ಶ್ಮೀರ ಮೊದಲಾದ ದೇಶಾಧಿನಾಯಕರ ಸ 

ದ್ವಾರದಿಂದೋಲೈಸಿಕೊಳುತಿರ್ದನಾ ಭೂಪನುತ್ಸವದೊಳೇನೆಂಬೆನು॥೧೯॥


ಆ ರಾಜನರ್ಧಾಂಗಿ ಹರಿವೇಣಿ ಶುಕವಾಣಿ 

ವಾರಿರುಹ ಸಮನೇತ್ರೆ ಕನಕವಲ್ಲೀಗಾತ್ರೆ 

ವಾರಣಾಹಿತ ಮಧ್ಯೆ ಕುಂಭಕುಚೆ ಗಿರಿಜಘನೆ ಗಜಗಮನೆ ಕಂಬುಕಂಠೆ॥ 

ತಾರೇಶವದನೆ ತಿಲಪುಷ್ಪನಾಸಿಕೆ ಮದನ 

ಧಾರೆಯಾ ಚಲುವತನ ಸೆರೆವಿಡಿದಳೆಂಬಂತೆ

ನಾರಿಕುಲತಿಲಕಮಣಿಯೊಪ್ಪಿರ್ದಳೇನೆಂಬೆ ನೂತನಾದೇವಿಯೆಂಬ॥೨೦॥ 


ಹರಿಲಕ್ಷ್ಮಿಯಂತರಸ ನೂತನೆಯುಮೀರ್ವರುಂ 

ಪಿರಿದಾಗಿ ಬಾಳುತ್ತ ರಾಜ್ಯಭಾರದ ಕ್ರಮವ 

ನರಿತು ಸತ್ಯದ ನಡತೆಯಂ ತಾವು ನಡೆಯುತ್ತ ಗುರುದೇವತಾದಿಗಳನು॥ 

ಪರಿಪರಿಯ ಪೂಜಿಸುತ ಪಾರ್ವತೀವಲ್ಲಭನ 

ಕರುಣಮಂ ಬೇಡುತ್ತ ಬಡವರಂ ರಕ್ಷಿಸುತ 

ಲಿರುತಿರ್ದರೇನೆಂಬೆನಚ್ಚರಿಯನಂದವರು ಭೂಮಿಯಂ ಪಾಲಿಸುತಲಿ॥೨೧॥


ಗುರುವರೇಣ್ಯಂ ಪರಮ ಲಿಂಗನಿಷ್ಠಾಪರಂ

ಹರಚರಣ ಸರಸಿರುಹ ಷಟ್ಪದಂ ಸನ್ಮಾರ್ಗ 

ನುರುಮತ್ತಿ ಮಠದೀಶನಾರ್ಯಾಬ್ಧಿ ಚಂದ್ರಮಂ ಗುರುಚನ್ನಬಸವೇಶನ॥ 

ವರಪಾಣಿ ಸರಸಿಹರುಹಸಂಭವಂ ಬಸವಕವಿ 

ವಿರಚಿಸಿದನೀ ಸಿದ್ಧಲಿಂಗೇಂದ್ರ ಕಾವ್ಯಮಂ 

ಹರುಷದಿಂ ಸದ್ಭಕ್ತರೊಲವಿನಿಂ ಕೇಳ್ದಿದಂ ಶಿವನ ಕೃಪೆಯಂ ಪಡೆವುದು॥೨೨॥


ಸಂಧಿ - ೩ 


ಒಂದುದಿನಮೋಲಗದೊಳೋರ್ವಬಡವಂ ಬಂದು 

ತಂದೆ ನೀಂ ಸಲಹೆನಲ್ಕವನ ಕಂದನ ಕೊಂಡು 

ಒಂದೂರಮುಂಬಳಿಯ ಕೊಟ್ಟು ಮನೆಗೈತಂದು ಸುಖಮಿರ್ದನಾ ಭೂಪನು॥ ಪದ ॥ 


ವಾರ್ಧಿಕ : 


ಕುವನ ಶುಚಿ ಪವನಖ ವಿಧುತಪನ ಸುಪುರುಷತನು 

ಜವನಹರ ಜಡಜಸುತ ಜಡಜದೃಗಮರನಿಕರ 

ದಿವಿಜಪತಿ ವಿನುತ ಭುಜಗಧರ ಕುಧರಗೃಹ ಗಗನಕುಚ ಗರಳಧರ ಪರತರ॥ 

ಧವಳತನು ಪವನಸಖನಯನ ಕಲುಷಚಯಗಿರಿ 

ಪವಿಮದನತನು ವಿಪಿನಶಿಖಿ ಧನಪಸಖ ಪರಮ 

ಕವಿನುತನೆ ವೇಶ್ಯಾತಟಾಕೇಶ ಗುರುಸಿದ್ಧಲಿಂಗ ಮಿಗೆ ಸಲಹೆಮ್ಮನು॥೧॥ 


ಒಂದು ದಿನ ಭೂಪಾಲನತಿವಿಭವದಿಂದಲೈ 

ತಂದು ಓಲಗದೊಳೊಪ್ಪಿದನಿಂದ್ರ ಪಾವಕರೊ 

ಚಂದಿರನೊ ಧನಪತಿಯೊ ಕುರುಪತಿಯೊ ಮುರಹರನೊ ಶತಪತ್ರ ಸತ್ಪುತ್ರನೊ॥ 

ದಂಡಶೂಕೇಶ್ವರನೊ ಕರ್ಬರನೊ ದಿನಮಣಿಯೊ 

ಎಂದೆನಿಸಿಕೊಳ್ವಂತೆ ಪರರಾಜನಿಕರದಿಂ 

ದಂದದಿಂದೋಲೈಸಿಕೊಳ್ಳುತಲೊಪ್ಪಿರ್ದನರುಣೋದಯದ ಕಾಲದಿ॥೨॥


ಆ ರಾಜನಿದಿರೊಳ್ ಸುವಿಚಾರಪರನೆಂಬ 

ಶೂರಮಂತ್ರೀಶ್ವರಂ ಸಕಲ ದೇಶಂಗಳಂ 

ಧಾರಿಣೀಪ್ರಜೆಗಳಂ ಕ್ಷೇಮಲಾಭಂಗಳಂ ರಾಜಾಧಿರಾಜರ್ಕಳ॥ 

ವೃರಮಂ ಕರಣಿಕರ ಮಂತ್ರಿಗಳ ನಿವಹಮಂ 

ಪೂರತಜ್ಜನಗಳಂ ಸುವಿಚಾರಮಂ ಮಾಡು 

ತಾ ರಾಜಿಸುವ ಸಭಾಮಧ್ಯದೊಳಗೊಪ್ಪಿದಂ ನೃಪನ ಬಲಭುಜಮೆಂಬೊಲು॥ ೩॥


ಈ ರೀತಿಯಿಂದೆಸೆವವರ ಮಹಾಸಭೆಯೊಳಗೆ

ಭೂರಿ ಸಂತೋಷದಿಂ ಮೃಗರಾಜಪೀಠದೊಳ್ 

ಧಾರುಣೀಪತಿ ವಿಕ್ರಮಾದಿತ್ಯನೊಪ್ಪಿರಲ್ಕಷ್ಟರೊಳಗೋರ್ವ ಬಡವಂ॥ 

ದೂರದಿಂದೈತಂದುರಾಜನಿದಿರೊಳ್ ನಿಂದು 

ಕಾರುಣ್ಯನಿಧಿಯೆ ಹಾಯೆಂದು ಮೊರೆಯಿಟ್ಟು ಬಹು 

ದಾರಿದ್ರದಿಂ ನಾನು ಬಳಲಿದೆಂ ತೊಳಲಿದೆಂ ಸಲಹೆಂದನಾ ಬಡವನು॥೧೮॥ 


ಭೂರಾಜನೀ ಬಡವನಂ ನೋಡಿ ಮೊರೆಯಿಟ್ಟ 

ಕಾರಣವದೇಂ ಪೇಳು ಭಯಬೇಡವೆಂದೆನಲ್ 

ಭೂರಿದುಃಖಂಗಳಿಂ ಮನ ಮರುಗಿ ಬಾಯಾರಿ ಪೇಳ್ದೆನತಿ ದುಗುಡದಿಂದ॥ 

ಹೇ ರಾಜ ನನಗೀಗ ಬಡತನಂ ಬಂದು ಬಹು 

ಸೂರೆ ಮಾಡುತಲೈತೆ ತಿನ್ನುವರೆಯೇನಿಲ್ಲ

ಈರೈದು ಮಕ್ಕಳೆನಗುಂಟು ಕಾಟದೊಳ್ ಕಾಲಮಂ ಕಳಿಯಲಾರೆ॥೧೯॥ 


ತನುವಿಗುಡುವರೆ ಬಟ್ಟೆ ಮೊದಲಿಲ್ಲ ವಿರುವದಕೆ 

ಮನೆಯಿಲ್ಲಮೆನ್ನ ಸರಿಬಾಂಧವರು ಮಾತುಗಳ 

ಸನುಮತದೊಳಾಡೆನ್ನ ಕರೆದು ಕೊಡುವವರಿಲ್ಲಮವನಿಜನ ಬಡವನೆಂದು॥ 

ಮನಸಿನೊಳ್ ಗರ್ವದಿಂ ಜರಿದು ನಿಂದಿಸುತಿಹರು.

ವನಿತೆಯೋರ್ವಳು ಬೈದು ದುಃಖಮಂ ಮಾಡುವಳು

ಮನುಜೇಂದ್ರನೀ ಕೆಟ್ಟ ದಾರಿದ್ರಮಂ ಕಳೆದು ಸಲಹೆಂದು ಬಳಿಕೆಂದನು॥೨೦॥ 


ಪುರದೇವರೆನಗೆಮಾ ಮಲ್ಲಿಕಾರ್ಜುನಸಾಮಿ 

ಹರಕಲುಂ ಮಲ್ಲಯ್ಯನೆಂಬ ನಾಮಾಂಕಿತದಿ 

ಧರಣಿಯೊಳ್ ಪುಟ್ಟಿದಾರಭ್ಯ ದಾರಿದ್ರಮಂ ಕಡೆತನಕ ನಾಂ ಜೀವಿಸಿ॥ 

ಕೊರಗಿದೆಂ ಕರಗಿದೆಂ ನಾನಾ ಪ್ರಕಾರದಿಂ 

ಸರಿಯಿಲ್ಲದಿರೆ ಲೋಕದೊಳಗೀಗ ಬಾಳುವುದು 

ಹರಹರಾ ಬೇಡೆಂದು ಧರಣೀಶನಿದಿರೊಳ್ ದುಃಖದಿಂ ಪೊರಳಿದನು॥೨೧॥ 


ಎಲೆ ಮಹಾಭೂಪಾಲ ಕೇಳೆನಗೆ ದಾರಿದ್ರ 

ಕುಲವಳಿದು ಸಲಹಿದರ ಪುತ್ತರೊಳಗೊಬ್ಬನಂ 

ಸಲೆ ನಿನ್ನ ಪಾದಾಬ್ಜಕೊಪ್ಪಿಸುವೆನೆಂದಾಗ ದುಗುಡದಿಂ ದುಃಖಿಸಲ್ಕೆ॥ 

ನೆಲದರಸ ನೋಡಿವನ ದುಃಖಮಂ ಕಂಡು ಬಹು 

ಬಳಲಿ ಬಿಲ್ಹಳ್ಳಿಯಂ ಕೊಟ್ಟವನ ಪುತ್ರನಂ 

ನಲವಿನಿಂ ತೆಕ್ಕೊಂಡು ನೆಲಕರಸನಂ ಮಾಡಿ ರಾಣುವೇರಾಯನೆಂದು ॥೨೨॥


ವೆಸರ್ಗರೆದು ಹರುಷದಿಂದವನೆನಗೆ ಮಗನೆಂದು 

ರಸೆಯರಸನತಿ ವಿಲಾಸದೊಳವನಿಗಂ ಮತ್ತೆ 

ಪೊಸ ವಾಜಿದಂತಿಗಳ ನಿಕರಮಂ ತಾನಿತ್ತು ಸಕಲ ವಿಭವಂಗಳೊಡನೆ॥ 

ವಿಸುಖದಿಂದಂದಣಮನೇರಿ ಪ್ರಜೆವಾರಕಂ 

ರಸೆಯರಸರಿಂಗಪ್ಪಣೆಯನಿತ್ತು ವಾದ್ಯದಿಂ 

ಬಿಸಜಾತಸಖನಂತೆ ಶೋಭಿಸುತ್ತರಮನೆಗೆ ಬಂದನು ಭೂಪಾಲನು॥೨೩॥ 


ಅರಸನಂ ದೂರದಿಂ ನೋಡಿ ನೂತನದೇವಿ

ಕರಕಮಲದೊಳ್ ಜಲದ ಗಿಂಡಿಯಂ ಪಿಡಿಕೊಂಡು 

ಚರಣಕಮಲವ ತೊಳೆದು ದೇಹದೊಳಗದನಾಂತು ಸದ್ಭಕ್ತಿಯಿಂದೊಳಯಿಕೆ॥ 

ಕರೆದೊಯ್ಯೆ ಮೃಗರಾಜಪೀಠದೊಳ್ ಮಂಡಿಸಲ್ 

ಧರಣೀಂದ್ರನೀ ದಿವಸ ತಡವಾಯಿತ್ಯಾಕೆಂದು 

ಕರಕಂಜಮಂ ಮುಗಿದು ಕೇಳಲ್ಕೆ ಸತಿಯೊಡನೆ ಪೇಳ್ದನತಿ ಸಂತಸದೊಳು॥೨೪॥ 


ನಾರಿಕುಲತಲೆರನ್ನೆ ಕೇಳ್ವುದಿಂದಿನದಿನಂ 

ದಾರಿದ್ರನೋರ್ವನೈತಂದೆನ್ನ ಪಾದಮಂ 

ಕ್ರೂರತ್ವದಿಂ ವಿಡಿದು ಸಲಹೆಂದು ಮೊರೆಯಿಟ್ಟು ದುಃಖದಿಂ ಪೊರಳಿಯವನು॥ 

ಈರೈದು ಮಕ್ಕಳೆನಗುಂಟವರೊಳೊಬ್ಬನಂ 

ಚಾರುಪದಕೊಪ್ಪಿಸುವೆನೆನ್ನ ದಾರಿದ್ರಮಂ 

ಬೇರನುರೆ ಕಡಿದದಂ ಪರಿಹರಿಪುದೆಂದವಂ ಬಹು ಬಳಲಿದೆನ್ನಿದಿರೊಳು॥೨೫॥ 


ಅತಿದುಃಖಮಂ ನೋಡಿ ಬಿಲ್ಹಳಿ ಗ್ರಾಮಮಂ 

ಸತತಮುಂಬಳಿ ಮಾಡಿಕೊಟ್ಟವನ ಪುತ್ರನಂ 

ಸುತನಂತೆ ಮಾಡಿಕೊಂಡವನಿಂಗೆ ರಾಣುವೇಭೂಪಾಲನೆಂದು ಪೆಸರಂ॥ 

ಕ್ಷಿತಿಪರೆಲ್ಲರುಂ ಕೂಡಿ ಕರದವಗೆ ಹರುಷದಿಂ 

ದತುಳ ಕರಿಘಟೆಗಳಂ ತುರಗಮಂ ಕೊಟ್ಟಿಂತು 

ಮತಿವಂತೆ ನಾಂ ಬಂದೆನೆಂದವನಿಪಾಲಕಂ ಪೇಳ್ದನತಿ ಸಂತೋಷದಿ॥೨೬॥ 


ಕೇಳಿದಳ್ ಕಿವಿಗೊಟ್ಟು ತಾಳಿ ಸಂತೋಷಮಂ 

ಭೂಲೋಲನಡಿಗೆರಗಿ ಭಕ್ತಿಯಿಂ ಸ್ನಾನಮಂ 

ಕಾಲಕ್ಕೆ ಸರಿಯಾಗಿ ಮಾಡಿಸುತ್ತರಸಂಗೆ ಶಿವಪೂಜೆಗೆಡೆಯ ಮಾಡೆ॥ 

ಶೀಲ ಸ್ವಭಾವದಿಂ ಬಂದು ಭೂಪಾಲಕಂ 

ಮೇಲಾದ ಗದ್ದಿಗೆಯೊಳರ್ಥಿಯಿಂಶಮಂಡಿಸುತ 

ಭಾಳಾಕ್ಷನಂ ಕುರಿತು ಪೂಜೆ ಮಾಡಲ್ಕನುವನೆಸಗಿದವನೇನೆಂಬೆನು॥೨೭॥ 


ಮೊದಲೊಳಭಿಷೇಕಮಂ ಮಾಡಿ ಶ್ರೀಭಸ್ಮದಿಂ 

ದದಕೆ ಲೇಪನಗೈದು ಗಂಧದಿಂದಕ್ಷತೆಯು 

ಮುದದಿ ಕುಸುಮಂ ಧೂಪ ದೀಪದಿಂ ಘಂಟೆಯಿಂದಾದರ್ಶವ್ಯಜನಚವರಿ॥ 

ಸದಮಲದ ಛತ್ರವನ್ನೆತ್ತಿ ಪುಷ್ಪಾಂಜಲಿಯ 

ಮದನಾರಿಗಂ ಮಾಡಿ ಶಿರಸಾಪ್ರದಕ್ಷಿಣಮ 

ನೊದವಿನಿಂ ನಮಿಸುತ್ತಲಭವನಂ ನುತಿಸಿದಂ ಸದ್ಭಕ್ತಿಯಿಂ ವಿಕ್ರಮಂ॥೨೮॥ 


ಭವಪದ್ಮ ಮೃಗಲಕ್ಷ್ಮಭವಭುಜಗ ದ್ವಿಜರಾಜ 

ಭವಕುರುಹ ಪರಶು ಭವದಂತಿ ಮೃಗರಾಜೇಂದ್ರ 

ಭವಸಿಂಹ ಶರಭ ಭವಭಂಗಹಲ್ಲಕತಪನ ಭವನಾಶ ಭಕ್ತಕೋಶ॥ 

ಭವವಿಪಿನ ದಾವಾಗ್ನಿ ಭವಸಿಂಧು ಕುಂಭಭವ

ಭವಶೈಲ ವಜ್ರಭವ ಕೀಲಾಲಧರವಾತ 

ಭವವಾಯಸೋಲೂಕ ಕೈಲಾಸಗಿರಿವಾಸ ಗುರುಸಿದ್ಧ ಸಲಹೆಮ್ಮನು॥೨೯॥ 


ಈ ರೀತಿಯಿಂದಭವನನ್ನುತಿಸಿ ತೋಷದಿಂ 

ದಾರತಿಯ ವೆಳಗಿ ಕರಕಂಜಾತಮಂ ಮುಗಿದು 

ಭೂರಿ ಕುಸುಮಾವಳಿಯನಿಳುಹಿ ಸಿರಿಪತ್ನಿಯಂ ಧಾರುಣೀಪತಿ ಕರೆಯಲು॥ 

ಭೋರನೈತಂದವಳು ಪರಮಾನ್ನಮಂ ನೀಡಿ 

ಸಾರಘೃತ  ಶರ್ಕರೆಯು ಚಿನಿವಾಲುವಂ ಮತ್ತೆ 

ಬೇರೆ ಬೇರೆಡೆ ಮಾಡಲವನು ತೋಷದಿ ಭುಂಜಿಸ್ಯಂಗನೆಗೆ ಶೇಷ ಬಿಟ್ಟು॥ ೩೨॥

 

ಹಿತದೊಳಪ್ಪಣೆ ಕೊಡಲ್ಕಾ ನಾರಿಯೈತಂದು 

ಪತಿಯ ಪ್ರಸಾದಮಿದು ಸಾಧ್ರವಾಯ್ತೆಂದು ಬಹು 

ವ್ರತದೊಳದ ಕೈಕೊಂಡು ಬಳಿಕ ಭುಂಜಿಸಿ ನೃಪಗೆ ವೀಳ್ಯಮಂ ಕೊಟ್ಟು ತಾನು॥

ಪತಿಯಾಸನಾರ್ಧದೊಳ್ ಕುಳಿತು ವೀಳ್ಯವ ಸವಿದು 

ಸತಿಪತಿಗಳಿರ್ವರುಂ ನಸುನಗುತ ತೋಷದಿಂ 

ರತಿಮದನನಂತೊಪ್ಪಿ ರಾಜಿಸಿದರಾ ಕಾಲದೊಳಗೆ ಹರಿಲಕ್ಷ್ಮಿಯಂತೆ॥೩೩॥ 


ಗುರುವರೇಣ್ಯಂ ಪರಮಲಿಂಗನಿಷ್ಠಾಪರಂ 

ಹರಚರಣ ಸರಸಿರುಹಷಟ್ಪದಂ ಸನ್ಮಾರ್ಗ 

ನುರುಮತ್ತಿಮಠದೀಶನಾರ್ಯಾಬ್ಧಿ ಚಂದ್ರಮಂ ಗುರುಚನ್ನಬಸವೇಶನ ॥ 

ವರ ಪಾಣಿ ಸರಸಿರುಹ ಸಂಭವಂ ಬಸವಕವಿ 

ವಿರಚಿಸಿದನೀ ಸಿದ್ಧಲಿಂಗೇಂದ್ರ ಕಾವ್ಯಮಂ

ಹರೈಷದಿಂ ಸದ್ಭಕ್ತರೊಲವಿನಿಂ ಕೇಳ್ದಿದಂ ಶಿವನ ಕೃಪೆಯಿಂ ಪಡೆವುದು॥೩೪॥ 


ನೆನಕೆ: 

ಕರ್ತೃ: ಬಸವಕವಿ, 

ಸಂಪಾದಕರು: 

ಡಾ. ವೈ. ಸಿ. ಭಾನುಮತಿ,

ಪ್ರಕಾಶಕರು:

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, 

ಮಾನಸ ಗಂಗೋತ್ರಿ, ಮೈಸೂರು.  


ಸದಾಶಿವಕವಿ ವಿರಚಿತ ಮಹಾಕೂಟ ಮಾಹಾತ್ಮ್ಯ, ( ಭಾಮಿನೀ ಷಟ್ಪದಿ) 


ಈ ಕೃತಿ ರಚಿಸಿದ ಕವಿ ಸದಾಶಿವ. ಕವಿಯ ಕಾಲ ಕ್ರಿ.ಶ. ೧೮೦೩ . ಇವನು ಪಂಪಾಕ್ಷೇತ್ರದ ಹತ್ತಿರವಿರುವ " ಪಾದಪದ್ಮ ಕರಮೆನಿಪ್ಪ ಪುರಂ" ಎಂಬ ಊರಿನವನು. ಇಂದು ಹಂಪೆಯ ಸಮೀಪದ ಕಮಲಾಪುರ ಇರಬಹುದು. ಈ ಊರಿನಲ್ಲಿ 

ಸಿದ್ಧರಾಮ ಎಂಬ ಕಲಾನಿಪುಣ. ಈತನ ಪುತ್ರ ಕೊಟ್ಟೂರ. ಈತ ಶಿವಕವಿ. ಕೊಟ್ಟೂರನ ಮಗ ಪ್ರಸ್ತುತ ಕವಿ ಸದಾಶಿವ.


ತಪಸ್ವಿಗಳು ಸೂತನಲ್ಲಿ ಕ್ಷೇತ್ರದಲ್ಲೆಲ್ಲ ಅಧಿಕವಾದಂಥ ಕ್ಷೇತ್ರ ಯಾವುದು? ತೀರ್ಥಗಳಲ್ಷಿ ಅಧಿಕವಾದ ತೀರ್ಥ ಯಾವುದು ? ಎಂದು ಕೇಳಿದರು. ಭೂಮಿಯಲ್ಲಿ ಇರುವ ಕ್ಷೇತ್ರಗಳಲ್ಲಿ ಮಿಗಿಲು ಮಹಾಕೂಟ ಕ್ಷೇತ್ರ.ಆ ಮಹಾಕ್ಷೇತ್ರದ ಮಹಾತೀರ್ಥ ಶ್ರೇಷ್ಠವಾದುದು, ಎಂತು ಸೂತಮುನಿ ತಿಳಿಸಿದರು. ಬಾದಾಮಿಯಿಂದ ಐದು ಕಿ. ಮೀ. ದೂರದ ನಂದಿಕೇಶ್ವರ ಗ್ರಾಮದ ಹತ್ತಿರ ಮಹಾಕೂಟ ತೀರ್ಥಕ್ಷೇತ್ರವಿದೆ. 


ಸೂಚನೆ: 

ಒಂದು ದಿನದಲಿ ಮುನಿಗಳೈತಂ 

ದಿಂದುಚೂಡಕ್ಷೇತ್ರ ಮಹಿಮೆಯ 

ನಂದು ಕೇಳಲ್ ಸೂತನೊರೆದಂ ತಾಪಸೋತ್ಕರಕೆ॥ 


ಶ್ರೀಮದಖಿಲನಿಲಿಂಪನಾಥ

ಸ್ತೋಮ ಮಕುಟತಟವಿಘಟಿತ ಮಣಿ 

ಧಾಮ ತರಣಿರುಚಿಪ್ರಭಾಸಿತ ಪಾದಪಂಕೇಜ ॥ 

ಕಾಮಿತಾರ್ಥಸುರಾವನೀರುಹ 

ಸಾಮಗಾನಪ್ರೀತ ಶಾಶ್ವತ 

ಧಾಮ ಶಂಕರ ಪಾಲಿಸೆನ್ನನುದಾರ ಕರುಣದೊಳು॥೧॥ 


ಶ್ರೀಕ ರಮಹಾಕೂಟವೆಂದೀ 

ಲೋಕದೊಳು ವಿಖ್ಯಾತಮಾದ 

ಸ್ತೋಕ ಮಹಿಮೆಯನಾಳ್ದ ಸುಕ್ಷೇತ್ರದ ಮಹತ್ವವನು॥ 

ಕಾಕುಮತಿಯಿಂದುಸುರ್ದಪೆಂ ಸು 

ಶ್ಲೋಕಭರಿತರು ಭಕ್ತರಾಲಿಪು

ದೀ ಕಥಾ ಕಥನ ಪ್ರಸಂಗಂ ತಾನದೆಂತೆನಲು॥೨॥ 


ಒಂದು ದಿನದಲಿ ತಾಪಸೋತ್ತಮ 

ವೃಂದವಾ ಸೂತಾಶ್ರಮಕೆ ನಲ 

ವಿಂದ ಬಂದು ಸಮಾಹಿತೆಯೊಳಿಹ ಸೂತನಂ ಕಂಡು॥ 

ವಂದಿಸುತ ಮುಕುಳಿತಕರಾಂಬುಜ 

ದಿಂದೆ ಬಿನ್ನವಿಸಿದುದು ಕೇಳೈ 

ತಂದೆ ವಿಜ್ಞಾಪನವದೊಂದು ಮನೋನುರಾಗದಲಿ॥೩॥ 


ಕ್ಷೇತ್ರದೊಳತ್ಯಧಿಕವಹ ಸು 

ಕ್ಷೇತ್ರಮಾವುದು ತೀರ್ಥತತಿಯಲಿ 

ಪಾತ್ರವಹ ಸತ್ತೀರ್ಥಮಾವುದು ತಾಪಸಾಧೀಶ॥ 

ಕ್ಷೇತ್ರತೀರ್ಥಮಹತ್ವಮಂ ವೈ 

ಚಿತ್ರಮಪ್ಪಂತೆಮಗೆ ಕರುಣಾ 

ಪಾತ್ರ ನೀಂ ಕರುಣಿಸೆ ಕೃತಾರ್ಥೀಭೂತರಾದಪೆವು॥೪॥ 


ಕೇಳಿರೈ ಮುನಿಗಳಿರ ನೀವಿಂ 

ದೋಳಿಯಿಂದೇಕಾಗ್ರಚಿತ್ತದಿ 

ಪೇಳುವೆಂ ನಾನೀ ಧರಾಭಾಗದೊಳು ಸುಕ್ಷೇತ್ರ ॥ 

ಪಾಳಿಯುಂಟವಕೆಲ್ಲ ಮಿಗಿಲೆಂ 

ಬೇಳಿಗೆಯಿನವನಿಯೊಳು ಸತತಂ 

ಬಾಳವಿಸುತಿರ್ಪುದು ಮಹಾಕೂಟಾಭಿದಂ ಕ್ಷೇತ್ರಂ ॥ ೬॥


ಆ ಮಹೀಧರದಗ್ರದಲಿ ತಾಂ 

ರಾಮಣೀಯಕಮಾಗಿ ಮೆರೆದ 

ತ್ತಾ ಮಹೇಶನ ಭವನವಂತದನೇನ ವರ್ಣಿಸುವೆಂ॥ 

ಸೋಮಪಾವಕ ಸೂರಮಂಜುಳ 

ಧಾಮಮಂ ಪಳಿಕೈವುತಂ ನಿ 

ಸ್ಸೀಮ ವಿಭವದಿನೊಪ್ಪುತಿರ್ದುದು ಶಂಕರಾಗಾರಂ॥೯॥ 


ಇಂತು ಸಾಕಾರವನು ತಾಳ್ದಾ

ಕಂತುಮರ್ದನನಿರುತಿರಲ್ಕೋ

ರಂತೆ ಶಂಕರನಿರ್ಪ ಸಭೆಗೆ ಭವಾನಿಯೈತಂದು ॥ 

ಮುಂತೆ ಪತಿಯಂ ಕಂಡು ಮನದಲಿ

ಸಂತಸಮನಾಳ್ದಗಜೆ ಮಂಜುಲ 

ತಾಂತತಿಯಂತಿರ್ದಳಡಿದಾವರೆಯೊಳೀಶ್ವರನ॥೧೫॥ 


ದೇವ ದೇವ ಮಹೇಶ ಕಂಚಿ ಮ

ಹಾ ವಟಾರಣ್ಯಾರುಣಾಚಲ 

ಪಾವನ ಶ್ರೀಶೈಲ ಪುಷ್ಕರ ಕಾಶಿ ಕೇದಾರ 

ಭಾವಿಸಲ್ ಗೋಕರ್ಣ ಮೊದಲಾ

ದೀ ವಸುಧೆಯೊಳಗಖಿಲ ಸುಕ್ಷೇ 

ತ್ರಾವಳುಯುಮುಂಟೆಂದು ಮತ್ತಿಂತೆಂದಳಗಜಾತೆ॥೧೮॥ 


ಕ್ಷಿತಿಯೊಳೀ ಕ್ಷೇತ್ರಂಗಳೊಳು ನಿನ 

ಗತಿಹಿತಕರ ಕ್ಷೇತ್ರಮಹಿಮೆಯ 

ನತಿಕುತುಕದಿಂ ಪೇಳೆನಲು ಪೇಳಲ್ಕೆ ತೊಡಗಿದನು॥ 

ಕ್ಷಿತಿಧರಾತ್ಮಜೆ ಕೇಳು ನಿನ್ನೀ 

ಶ್ರುತಿಗಳೊಳು ಮಧುರಸದ ಸರಿ ತಾ 

ನತಿಶಯದಿ ಸುರೆವಂತೆ ಪೇಳುವೆನೆಂದನಾ ದೇವ॥೧೯॥


ಇಂತಿವೆಲ್ಲಕೆ ಮಿಗಿಲೆನಿಸುತಂ 

ತಿಂತುಮೆಂದುಪಮಿಸಲುಬಾರದ

ನಂತಮಹಿಮೆಯನೀಳ್ದುಕೊಂಡೊಪ್ಪುವದು ಮಹಕೂಟ॥ 

ಕಾಂತೆ ಕೇಳಾ ಕ್ಷೇತ್ರವೆಮಗದು 

ಸಂತಸದ ನೆಲವನೆಯು ಬಳಿಕದ 

ರಂತರಾಂತರವಂ ವಿಚಾರಿಸು ಚಕಿತ ಹರಿಣಾಕ್ಷಿ॥೨೧॥ 


ಆ ಮಹಾಕೂಟದೊಳು ಕಾನಕ 

ಭೂಮಿಧರಮೊಂದುಂ ಜನೇಕ್ಷಣ 

ರಾಮಣೀಯಕಮಾಗಿ ಕಾಣ್ಬುದು ಯುಗದ ಭೇದದೊಳು॥ 

ಆ ಮಲಪ್ರಹರಿಯ ಸುಪುಣ್ಯಾ 

ರಾಮ ಪಶ್ಚಿಮಭಾಗದೊಳಗು 

ದ್ದಾಮ ತಪದಿಂದಿರ್ದನಂದಾ ವ್ಯಾಘ್ರಪಾದಮುನಿ॥೨೪॥ 


ಧರಣಿಧರ ಶಾರ್ದೂಲನಂದನೆ 

ತರುಣಿ ಸುಕ್ಷೇತ್ರದ ಮಹಾವಿ 

ಸ್ತರವದತಿಶಯವಾರಿಗೆಯು ಪೇಳಲ್ಕಗೋಚರವು॥ 

ನಿರುತದಿಂದಂ ಕ್ರೋಶಪಂಚಕ 

ದಿರವಿನಲಿ ಸದ್ಭಕ್ತಿಯಿಂ ಸಂ 

ಚರೆಪನಾವನಘಪ್ರತತಿಯಿಂ ಮುಕ್ತನಹನವನು॥೨೮॥ 


ಅಂತುಮಲ್ಲದೆ ಪರ್ವಕಾಲವ 

ನಂತಮುಂಟವರೊಳು ವಿಶೇಷವ 

ನಾಂತ ಕಾಲವನುಸುರ್ದಪೆಂ ಶೈವರ್ಗೆ ವಿವರದಲಿ॥ 

ಕಾಂತೆ ಮಾಧವಮಾನಸದೊಳಗೋ 

ರಂತೆ ಮೇಷಗ ಸೂರ್ಯನೊಳು ಸಂ 

ಕ್ರಾಂತಿಯೊಳು ಪೌರ್ಣೋಮಿಯೊಳಗುಂ ಗ್ರಹಣಕಾಲದಲಿ॥೨೯॥ 


ಇವು ಮೊದಲು ತರತರದೊಳೊಪ್ಪುವ

ವವನಿತಳದಲಿ ಪರೂವತತಿಗಳು 

ಯುವತಿ ಕೇಳು ತೀರ್ಥದೊಳು ಪೂರ್ವೋಕ್ತ ತಿಥಿಗಳೊಳು॥ 

ಸವಿಧಿಯಿಂದಂ ಮಿಂದು ಭಕ್ತಿಯೊ 

ಳವಿರತ ಮಹಾಕೂಟದೇವ 

ಪ್ರವರನಂ ಪೂಜಿಸುವನಾವನವಂ ಧರಿತ್ರಿಯೊಳು॥೩೧॥ 


ಮಾತೃಗರ್ಭದೊಳುದಯಿಸಂ ಶುಚಿ 

ಗಾತ್ರೆ ಕೇಳುದಯಿಸಿದೊಡಂ ಸುಪ 

ವಿತ್ರಯೋಗಿಗಳಾಲಯಂಗಳೊಳವನಿಪತಿಗಳೊಳು॥ 

ಪಾತ್ರ ಪದದೊಳು ಜನಿಯಿಪಂ ವಿಷ 

ಪಾತ್ರನೆಂದಿಂತುಸುರೆ ಕೇಳ್ದಾ 

ಗೋತ್ರತನುಭವೆ ಮರಳಿ ಬಿನ್ನವಿಸಿದಳು ಪರಶಿವಗೆ॥೩೨॥


ಅವಧರಿಸಿರೈ ದೇವಿಯೆಂದುದ 

ನವಿಕಲಮತಿಗಳಿರಾ ಗೌರಿಯ 

ಭವನ ಲಪನಮನೀಕ್ಷಿಸುತ್ತಿಂತೆಂದಳೆಲೆ ದೇವ 

ಅವಧರಿಸು ಬಿನ್ನಪವ ನೀನೀ 

ಭುವನದೊಳಗಾ ಕ್ಷೇತ್ರ ವಿಸ್ತಾ 

ರವನು ನೋಳ್ಪೆಂ ತೋರ್ಪುದೆನಗಿಂತೆಂದಳಾ ದೇವಿ॥೩೪॥ 


ಎನೆ ನಸುನಗುತೆ ಶಂಕರಂ ತಾ 

ನನಘನಾಗಳೆ ದೇವಿಯಾಲಿಂ 

ಗನವನೆಸಗುತ್ತಂಕದೊಳು ಕುಳ್ಳಿರಿಸಿ ಪದುಳದೊಳು॥ 

ಘನವೃಷೇಶನ ಏರಿ ನಾನಾ 

ಮುನಿಗಣಸ್ತುತನಾಗಿ ನೋಡು 

ತ್ತನುನಯದೊಳೈತಂದನಾ ಮಹಕೂಟದೆಡೆಗಂದು॥೩೫॥ 


ಯೋಗಿವಂದಿತೆ ನೋಡು ನೀಂ ಮೃಗ 

ಪೂಗದಿಂ ಪಕ್ಷಿ ಪ್ರಸರದಿಂ 

ಪೂಗ ಹಿಂತಾಲಾರ್ಜುನೌದುಂಬರ ಪನಸ ತಿಲಕ॥ 

ನಾಗ ಕುರವಕ ಕಕುಭತಿಂದುಕ

ಮಾಗಧಾದಿ ನಗಂಗಳಿಂ ಚ 

ನ್ನಾಗಿ ರಾಜಿಸುತಿರ್ಪುದಾಗಳು ಶ್ರೀ ಮಹಾಕೂಟ॥೩೬॥ 


ತರುಣಿ ಕೇಳೀ ಕ್ಷೇತ್ರದಲಿ ಮದ 

ಕರಿ ಶರೀರದ ತೀಂಟೆಯಂ ತಾಂ 

ಕರನಖರದಿಂ ತುರಿಸುತಂ ಪಂಚಾಸ್ಯಮೊಪ್ಪುವದು॥ 

ವರ ಭುಜಂಗಂ ಸುಪ್ತಬರ್ಹಣ

ದರೆವಿನಿರ್ಯಚ್ಛ್ಯಾಸಪಾರಣ

ಭರಿತಸುಖದಿಂ ಮೆರೆವುತಿರ್ದುದು ಮತ್ತಗಜಗಮನೆ॥೩೭॥ 


ಈತನೇ ಕಪಿಲೇಶ್ವರಂ ಬಳಿ 

ಕೀತನೇ ರಾಮೇಶ್ವರಂ ಮ 

ತ್ತೀತನೇ ಪಿನಾಕೇಶ್ವರಂ ಶ್ರೀವ್ಯಾಘ್ರಪಾದೇಶ॥ 

ಈತನೇ ವರ ಮಲ್ಲಿಕಾರ್ಜುನ 

ನೀತನೇ ಮಹಕೂಟಮಿಂತಿದು 

ಸೀತನಗತನುಜಾತೆ ಮತ್ತಿದು ವಿಷ್ಣುಪುಷ್ಕರಿಣಿ॥೪೦॥ 


ಎಂದು ಶಿವನಾ ಕ್ಷೇತ್ರಮಹಿಮೆಯ 

ಚಂದಮಂ ತೋರುತ್ತ ಗಿರಿಜೆಗೆ 

ಮಂದಸುಖದಿಂದಿರ್ದನಲ್ಲಿಯೆನುತ್ತ ಸೂತಮುನಿ॥ 

ಕಂದುಗೊರಲನ ಭಕ್ತರಿಗೆ ಪೇ 

ಳ್ದಂ ದಯಾನಿಧಿ ಈ ಕಥೆಯನೊಲ 

ವಿಂದ ಬರೆದೋದಿದರಿಗಿಷ್ಟಾರ್ಥಂಗಳೊಂದುವವು॥೪೧॥


ಸಂಧಿ - ೨ 


ಸೂಚನೆ : 

ತೀರ್ಥ ದಿವ್ಯಕ್ಷೇತ್ರ ಮಹಿಮೆಯ 

ನರ್ಥವಿಸಿ ಪೂರ್ವೇತಿಹಾಸಮ

ನರ್ಥಿಯಿಂದಂ ಪೇಳ್ದನಾ ಮುನಿಗಳಿಗೆ ಸೇನಾನಿ॥ 


ಆದಿಯೊಳು ಕದಳೀವನಸ್ಥಿತ 

ರಾದ ಶೌನಕ ಮುಖ್ಯ ಮುನಿಗಳು 

ಮೋದದಿಂದೈತಂದು ತಾರಗಿರೀಂದ್ರದಗ್ರದೊಳು॥ 

ನಾದಮೂರ್ತಿಯ ನಿಕಟದೊಳು ಕರು 

ಣೋದಧಿ ವಿಶಾಖನನಭೀಕ್ಷಿಸಿ

ವೇದಮಂತ್ರಗಳಿಂ ನುತಿಸುತಿಂತೆಂದರಳ್ತಿಯಲಿ ॥೧॥ 


ಶ್ರೀಕರ ಮಹಾದೇವಸುತ ಕರು 

ಣಾಕರನೆ ಕೇಳೆಮ್ಮ ನುಡಿಯಂ 

ಲೋಕದೊಳು ಗಂಗಾದಿ ತೀರ್ಥಗಳುಂಟು ಚಚ್ಚರದಿಂ ॥ 

ಪ್ರಾಕಟಂ ಮಿಗೆ ಪೇಳು ಜನಕಾ

ಲೋಕದಿಂ ಸದ್ಗತಿಯನೀವ 

ಸ್ತೋಕತೀರ್ಥಮನಹಗೆ ಸುತಪಸ್ಸಿದ್ಧಿಯಹ ಪದಮಂ॥೨॥ 


ಇಂತು ಮುನಿತತಿ ಬೆಸಗೊಳಲ್ಕಾ 

ಕಂತುಮರ್ದನನಾತ್ಮಜಂ ಮುದ 

ವಾಂತು ಕೇಳೆಲೆ ಮುನಿಗಳಿರ ನೀವು ಕೇಳ್ದರ್ಥವನು ॥ 

ಪಿಂತೆ ಶಾಂಕರಿ ಶಾಂಕರನನೋ 

ರಂತೆ ಕೇಳಲು ಪೇಳ್ದನಾನೇ 

ಕಾಂತದಲಿ ಕುಳ್ಳಿರ್ದು ಕೇಳ್ದೆಂ ಪೇಳ್ವೆನಾ ಕಥೆಯ॥೩॥ 


ಮತ್ತೆ ಕೇಳಿರಿ ಮುನಿಗಳಿರ ನೀ 

ವತ್ತಲಿತ್ತಲುಚರಿಪ ಮನಸಿನ 

ಕುತ್ತಮಂ ಕಡೆನೂಂಕಿ ಪೂರ್ವದೊಳುಕ್ತ ತೀರ್ಥಗಳ॥ 

ಮೊತ್ತದಿಂದತಿ ಸೂಕ್ಷ್ಮವೆನಿಪ ಸು 

ವೃತ್ತ ಮಾನಸತೀರ್ಥಮಂ ನಲ 

ವೆತ್ತಿ ಪೇಳ್ದಪೆನೆಂದುಸುರ್ದನಾನಂದಪಾಥೋಧಿ॥೫॥ 


ಶಮ ದಮ ತಿತಿಕ್ಷೋಪರತಿ ಸಂ 

ಯಮ ವಿತರಣಾರ್ಜವ ದಯಾರಸ 

ವಿಮಲಮತಿ ವಿಷಯಾನಭಿರತಿ ಬ್ರಹ್ಮಚರಿಯಾತ್ಮ ॥ 

ಸುಮತಿ ಧೃತಿ ಸುಜ್ಞಾನ ಸತ್ಯ 

ಪ್ರಮುಖ ಸುಗುಣಗಳಾಗಳುಂ ತಾ 

ನಮಮ ಮಾನಸತೀರ್ಥಮೆಂದುಸುರ್ದಪರು ಯೋಗಿಗಳು॥೬॥ 


ಧ್ಯಾನ ಪೂಜಾ ಜ್ಞಾನ ವಿದ್ಯಾ 

ದಾನ ಶೌಚ ತಪೋಯಶಸ್ಸಂ

ಧಾನಕೌಶಲನಾವನವನೇ ತೀರ್ಥಫಲಯೋಗಿ ॥ 

ಮಾನಸಾಧಿಕ ಮಲಿನದೋಷಮ

ದೇನುಮಿಲ್ಲದೆ ಚರಿಪನವನೆ ಕು 

ಲೀನನಾತನೆ ತೀರ್ಥವೃಂದಕೆ ತೀರ್ಥನೆನಿಸುವನು ॥೮॥ 


ತೋಯದಲಿ ಮುಳುಗಿದಡೆ ತನ್ನಯ 

ಕಾಯಮಲಿನಂ ಪೋಪುದಲ್ಲದೆ 

ವಾಯದಿಂದಂ ತಶ್ಯುಚಿತ್ವಂ ಪೊರ್ದುವುದೆ ಹೇಳ ॥ 

ತೋಯದಲಿ ಮಂಡೂಕ ಮತ್ಸ್ಯನಿ 

ಕಾಯಮುದಿಸುಗು ಮತ್ತೆ ಲಯಿಸುಗು 

ಮಾಯತಿಯೊಳವಕೆಲ್ಲ ಸದ್ಗತಿಯಹುದೆ ಭಾವಿಸಲು ॥೯॥ 


ರಾಗ ದಂಭ ದ್ವೇಷ ಮತ್ಸರ 

ರೋಗಮೋಹ ಪ್ರಮುಖ ಮಲಗಳ 

ನಾಗಳುಂ ಪರಿಹರಿಪ ಸುಜ್ಞಾನಾಂಬುಯುತಮಾದ ॥ 

ಯೋಗ "ಪೂ " ತಾಂತರ ಸುತೀರ್ಥದ 

ಭಾವದೊಳಗಾವಂ ಮುಳುಗುವಂ 

ಯೋಗಿಯಾತನೆ ಮುಕ್ತನಾತನೆ ಧನ್ಯನಹನವನು॥೧೦॥ 


ಇಂತು ಜೀವಹಿತಾರ್ಥದಿಂ ನಿ 

ಶ್ಚಿಂತಮಾದಾ ಬೊಮ್ಮಮೊಂದೋ 

ರಂತೆ ಪಂಚಾತ್ಮಕದಿನೊಪ್ಪುವುದಂತುಮಲೂಲದೆಯು ॥ 

ಸಂತತಂ ದ್ರುಹಿಣಂ ಪದಂ ಶ್ರೀ 

ಕಾಂತನೇ ನಾಭಿಯು ಜಠರಮಾ 

ನಂತ ರುದ್ರಂ ಬಾಹುಯುಗಮೀಶಂ ಸದಾಶಿವನು॥೧೬॥ 


ತಲೆಯುಮಿಂತೀ ಪಂಚಮೂರ್ತಿಗ 

ಳಲಸದಿರುವುದರಿಂದ ತಾನೀ 

ಸ್ಥಲಕೆಸುಮಹಾಕೂಟವೆಂಬಭಿಧಾನಮೊಪ್ಪುವದು॥ 

ಎಲೆ ಮುನಿಗಳಿರ ಮತ್ತಮಿಲ್ಲಿಯೆ 

ವಿಲಸಿತ ಶ್ರೀ ವಿಷ್ಣುಪುಷ್ಕರಿ 

ಲಲಿತ ತೀರ್ಥಂ ಜನಕೆ ಸುಕೃತವನೊದಗಿಸುತ್ತಿಹುದು॥೧೭॥ 


ಅದು ನಿಮಿತ್ತಂ ಕ್ಷೇತ್ರನಾಮವ 

ನೊದಗಿದುತ್ತಮಭಕ್ತಿಯಿಂದಂ 

ವಿದಿತವಾಗೆ ಸಮುಚ್ಚರಿಸಿದೊಡೆ ಮುಕ್ತಿ ದೊರಕುವದು॥ 

ಪದುಳದಿಂದಂ ಲಾಲಿಸಿರಿ ನೀ 

ವಿದರೊಳುಳ್ಳ ವಿಶೇಷಮಂ ಪೂ 

ರ್ವದೊಳು ಶಿವನಿಂದುದಿತಮಾದ ಮಹತ್ವಮಂ ಪೇಳ್ವೆಂ॥೨೦॥ 


ಭೂತಗಣ ರಕ್ಷಾಪರಂ ವರ 

ಭೂತನಾಥಂ ಭೈರವೇಶ್ವರ 

ನೋತು ಪಶ್ಚಿಮದೆಶೆಯೊಳಿರ್ಪಂ ಕೇಳ್ ಕ್ಷಮಾಧ್ರದೊಳು॥ 

ಸಾತಿಶಯದಿಂ ತತ್ಕುಧರದೊಳು 

ವಾತಸುತ ಹನುಮಂತನಿರ್ಪನ 

ದೀ ತೆರದೊಳು ರಾಜಿಸುತ್ತಾ ದ್ವಾಚತುಷ್ಟಯವು॥೨೭॥


ಸ್ನಾನ ದಾನ ವಿವರ್ಜಿತಂ ಶ್ರುತಿ 

ಹೀನನಧಮನಕಿಂಚನನುದಾ

ಸೀನಮತಿ ದೇಶಾಂತರವನೆಲ್ಲಂ ಪರಿಭ್ರಮಿಸಿ ॥ 

ಏನುಮಿಲ್ಲದೆ ಪುಣ್ಯವಶದಿಂ 

ದೀನವೀನಕ್ಷೇತ್ರಮಂ ಕಂ 

ಡಾ ನಮಿಸಿ ತದ್ವಿಷ್ಣು ಪುಷ್ಕರಣಿಯೊಳು ಮಿಂದನವಂ॥೩೦॥ 


ಮಲ್ಲಿಕಾರ್ಜುನದೇವನಂ ಕಂ 

ಡಲ್ಲಿ ಭಕ್ತಿಯುತಾತ್ಮನಾಗಿ ಸ 

ಮುಲ್ಲಸದ ತೀರ್ಥೋದಕದೊಳಭಿಷೇಕಮಂ ಮಾಡಿ॥ 

ಮಲ್ಲಿಕಾ ನವಬಿಲ್ವ ಕೋಮಲ 

ಪಲ್ಲವಾವಳಿಯಿಂದ ಪೂಜಿಸಿ 

ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಎಂದು ನುತಿಸಿದನು॥೩೧॥ 


ಎಂದು ನುತಿಸಿವ ಭೂಮಿನಿರ್ಜರ 

ಗಂದು ಕರುಣಾಂಭೋಧಿಶಂಕರ 

ನಿಂದುಚೂಡನುಮಾಪ್ರಿಯಂ ಪ್ರತ್ಯಕ್ಷನಾಗುತ್ತೆ ॥ 

ಕಂದ ಬೇಳ್ವುದು ನಿನ್ನಭೀಪ್ಸಿತ 

ದಂದಮಂ ನಾನೀವೆನೆಂದಾ 

ನಂದದಿಂದಂ ನುಡಿಯೆ ನಮಿಸುತೆ ಮತ್ತಮಿಂತೆಂದ॥೩೨॥ 


ಎಲೆ ಮುನಿಗಳಿರ ವಿಷ್ಣುಪುಷ್ಕರಿ 

ಸಲಿಲದಲಿ ವೈಶಾಖಮಾಸದ 

ಲಲಿತಪೌರ್ಣಮಿಯೊಳಗೆಮಿಂದುವಿಶಾಖತಾರೆಯೊಳು॥ 

ಚಲನಮಿಲ್ಲದೆ ವಿತರಣಾದಿಯ 

ನೊಲಿದು ನೆಗಳ್ದೊಡೆ ಕಾಳಿಯೊಳಗ 

ತ್ಯಲಘುತಪದಿಂದೊಗೆದ ಪುಣ್ಯಫಲಕ್ಕಿದೇ ಮಿಗಿಲು॥೩೫॥ 


ಇನ್ನು ಕೇಳಿರೆ ಮುನಿಗಳಿರ ಸಂ 

ಪನ್ನ ಭಕ್ತಿಯುತಾತ್ಮನೊರ್ವಂ 

ಚಿನ್ನಿಧಾನಂ ಸರ್ವಭೂತದಯಾನುಸಂಧಾನಂ ॥ 

ಮುನ್ನ ಮೌದ್ಗಲ್ಯಾಭಿಧಾನ ಸ 

ಮುನ್ನತಂ ಮುನಿಪುಂಗವಂ ಗುಣ 

ಸನ್ನಿಹಿತನಿರ್ದಂ ಪ್ರಭೂತಾನ್ಮಾಯ ಪಾರೀಣಂ॥೩೬॥ 


ಆದಿಯೊಳಯೋಧ್ಯಾನಗರಿ ಮೊದ 

ಲಾದ ಪುಣ್ಯಸ್ಥಾನಮಂ ಪುಗು 

ತಾದರದಿನಾಯಾಸಮಿಲ್ಲದೆ ಮುಕ್ತಿಫಲಮೆಲ್ಲಿ ॥ 

ವೇದಿಸದಖಿಲದೇಹಿಗಳಿಗೆಂ 

ದಾ ದಯಾಂಬುಧಿ ನೋಡಿ ಮುನಿಮತ 

ವಾದ ತಾಣಮಿದೆಂದು ತಪಮಂಗೈಯಲನುವಾದಂ॥೩೮॥ 


ಆರುತಿಂಗಳು ಫಲಗಳಂ ಮ

ತ್ತಾರುತಿಂಗಳು ಶುಷ್ಕಪರ್ಣಮ 

ನಾರುತಿಂಗಳು ಸಲಿಲಮಂ ಪವಮಾನನಂ ಮತ್ತೆ ॥ 

ಆರು ತಿಂಗಳು ಸೇವಿಸುತ್ತಂ 

ಘೋರತಪಮಂ ಮಾಡುತಿರ್ದಂ 

ಧೀರನಖಿಲಮುನೀಂದ್ರಪೂಜಿತನಂದು ಮೌದ್ಗಲ್ಯಂ॥೪೦॥ 


ಆ ಸಮಯದೊಳು ತತ್ತಪೋನಲ 

ರಾಸಿಯಿಂ ಬೇವುತ್ತ ನಿರ್ಜರ 

ರಾಸುರದೊಳೈತಂದು ಕಮಲಜನಡಿಗಳೊಳ್ ಕೆಡೆದು॥ 

ದಾಸಭಾವದಿ ನಿಂದು ಮನದು 

ದುಲ್ಲಾಸಮಿಲ್ಲದೆ ನಮಿಸುತಿರೆ ಕರು 

ಣಾಶರಧಿ ಏಳೇಳೆನುತ್ತಂ ಮತ್ತಮಿಂತೆಂದ॥ ೪೨॥ 


ಪೇಳಿರೆಲೆ ಶಕ್ರಾದಿಗಳಿರಿಂ 

ದೋಳಿಯಿಂ ನೀವೆಮ್ಮುವಂ ನುತಿ 

ಪೇಳಿಗೆಯಿದೇಂ ಕಾರಣಂ ನಿಮಗಾವ ಭಯವೆನಲು॥ 

ಪೇಳಲುದ್ಯೋಗಿಸಿದುದಮರರ 

ಪಾಳಿ ಮತ್ತಂ ನಮಿಸುತಜನಿಗೆ 

ಕೇಳು ದೇವಪಿತಾಮಹ ನೀನೆಮ್ಮ ಬಿನ್ನಪವ॥೪೩॥ 


ಇಂದು ಮೌದ್ಗಲ್ಯಂ ಮುನೀಂದ್ರನು 

ಮಂದ ತಪಮಂ ಪಲಪದಾಸೆಯ

ದಂದುಗದೊಳಂ ಮಾಡುತಿರ್ದಪನಾ ತಪೋನಲನಿಂ॥

ಬೆಂದೆವಾವೆಲ್ಲರುಮಾದಕೆ ನೀಂ 

ಮುಂದೆ ಗತಿಯಂ ನಿರವಿಸೆನೆ ನಗು 

ತೆಂದನಿಂದ್ರಪುರೋಗಮಾಮರವೃಂದಕಾ ದ್ರುಹಿಣಂ ॥೪೪॥ 


ಮತ್ತೆ ನಮಿಸುತ ಬೊಮ್ಮಗಮರರ 

ಮೊತ್ತವೈದಿತು ತಮ್ಮ ಲೋಕವ 

ನಿತ್ತಲಾ ಮೌದ್ಗಲ್ಯನುದ್ಧತ ತಪಕೆ ಮಚ್ಚುತ್ತ॥ 

ಚಿತ್ತಜಾರಿಯು ವತ್ಸಕೇಳ್ನಿ 

ನ್ನುತ್ತಮೇಷ್ಟಮನೆನಲು ತಾಪಸ 

ನತ್ತ ನೋಡದೆ ನೀನದಾರೆನಲರ್ಜುನಂ ನಾನು॥೪೭॥ 


ಬೇಡು ಬೇಡಿದುದೀವೆ ನಾನೆನೆ 

ನೋಡುತೆಂದಂಭೋಮಹೀರುಹ 

ನಾಡೆ ಎನ್ನೀಪ್ಸಿತವನೀಯಲ್ಕಳವೆ ನೆನಗಿಂದು॥ 

ಚೂಡಗಲ್ಲದೆ ಪೇಳೆನಲು ರತಿ 

ಮೂಡಿ ಮತ್ತಿಂತೆಂದನೇಶ್ವರ 

ನಾಡೊಳೀಯರ್ಜುನಪದಂ ಶುಭ್ರಾರ್ಥ ಪರಿಯಾಯಂ॥೪೮॥ 


ಇಂತು ನುತಿಸುವ ಮುನಿವೃಷಭನಂ 

ಕಂತುಮರ್ದನನೀಕ್ಷಿಸುತ ಮುದ 

ವಾಂತು ವರಮಂ ಬೇಳ್ವುದೈ ಮನದಿಷ್ಟವೇನೆನಲು॥ 

ಶಾಂತಮಾನಸನಾಗ ನೋಡುತ 

ನಂತಭರಣನೆ ಕೇಳ್ವುದೀ ಕ್ಷೇ 

ತ್ರಾಂತರದೊಳೆಲ್ಲರ್ಗೆ ಕರುಣಿಸು ಮುಕ್ತಿಸಂಪದಮಂ॥೬೦॥ 


ಈ ಮಹಾತೀರ್ಥಂ ಸುಪುಣ್ಯಾ 

ರಾಮವಾಗಲಿ ಸರ್ವಜಂತುಗ 

ಳೀ ಮಹಾಕೂಟವನು ಕಂಡೊಡೆ ಮುಕ್ತಿಪದವಿಯಲಿ ॥ 

ಕ್ಷೇಮದಿಂ ಬಾಳಲಿ ಇದೊಂದಂ

ಪ್ರೇಮದಿಂ ಕರೈಣಿಪುದು ನೀನೆನ 

ಲಾ ಮಹೇಶಂ ನಗುತ ಮತ್ತಂ ಬೇಳ್ಪುದೆನಲೆಂದಂ॥೬೧॥ 


ದೇವ ದೇವ ಮಹೇಶ ಶಂಕರ 

ತಾವಕೀ ಸದಯಾರಸದಿ ನಾಂ 

ಪಾವನಾತ್ಮಕನಾದೆನಿನ್ನೊಂದವಧರಿಸು ಬೇಳ್ವೆಂ॥ 

ಭಾವಜಾರಿಯೆ ಮಲ್ಲಿಗೆಗಳಿಂ 

ದಾವಗಂ ಪೂಜಿಪೆನು ನಿನ್ನುವ 

ನೋವಿಯರ್ಜುನನೆಂದುಪೆಸರಂ ಪೇಳಿದುದರಿಂದ ॥೬೨॥


ಮಲ್ಲಿಕಾರ್ಜುನನೆಂಬ ಪೆಸರಂ 

ಚಲ್ಲದಿಂ ಧರಿಸುವದು ನೀನೆನ 

ಲಲ್ಲಿ ಸಂತಸಮೊಂದಿ ಶಂಕರನೆಂದನಾ ಮುನಿಗೆ॥ 

ಬಲ್ಲಹನೆ ಕೇಳ್ ನಿನ್ನ ಮಾನಸ 

ದಲ್ಲಿ ಏನೇನಿಷ್ಟವದನಾ 

ನೆಲ್ಲವಂ ಕರುಣಿಸಿದೆನೈ ನಿನಗೆಂದು ಬಯಲಾದಂ ॥೬೩॥ 


ಅಂದು ಮೌದ್ಗಲ್ಲಯಂಗೆ ಧೂರ್ಜಟಿ 

ಯಂದವಾದಾ ವರಮನಿತ್ತುದ 

ರಿಂದ ಮಹಕೂಟದೊಳಗಿರ್ಪಂ ಮಲ್ಲಿಕಾರ್ಜುನನು॥ 

ಅಂದಿನಿಂದಂ ಮಲ್ಲಿಕಾರ್ಜುನ 

ನೆಂದು ಪೆಸರಂ ತಾಳ್ದನೆಂದೊಲ 

ವಿಂದ ಪೇಳ್ದಂ ತಾಪಸೋತ್ಕರಕಂದು ಸೇನಾನಿ॥೬೪॥ 


ಮತ್ತೆಯುಂ ಶ್ರೀಮಲ್ಲಿಕಾರ್ಜುನ 

ಗತ್ತ ದಕ್ಷಿಣಭಾಗದೊಳಗಿ 

ರ್ದತ್ತು ತೀರ್ಥಂ ವಿಷ್ಣುಪುಷ್ಕರಿ ನಾಮವದರಲ್ಲಿ॥ 

ಉತ್ತಮಸ್ನಾನದಿನಘಂಗಳ 

ಮೊತ್ತಮಳಿಗುಂ ಕೋಟಿಲಿಂಗ ಮ

ಹತ್ತರಾರ್ಚನದಿಂದೆ ನರರಿಗೆ ಜನ್ಮವಿನ್ನಿಲ್ಲ॥೬೫॥ 


ಶ್ರೀ ಮಹಾಕೂಟಾಭಿಧಾನೋ 

ದ್ಧಾಮ ಸುಕ್ಷೇತ್ರದ ಮಹಿಮೆಯಂ 

ಪ್ರೇಮದಿಂ ಪಠಿಸಿದೊಡೆ ಬರೆದೊಡೆ ಕೇಳ್ದಡನವರತ ॥ 

ಶ್ರೀಮಹಾದೇವನ ಕರುಣದಿಂ 

ದೀ ಮಹಿಯೊಳೆಲ್ಲಾ ಜನರು ಸುತ 

ಹೇಮಭೂಮಿಕಳತ್ರಸಖರಿಂದಿರ್ಪರೊಡಗೂಡಿ॥೬೭॥ 


ನೆನಕೆ: 

ಕರ್ತೃ : ಸದಾಶಿವ ಕವಿ,

ಸಂಪಾದಕರು: 

ಡಾ ॥ ವೈ. ಸಿ. ಭಾನುಮತಿ, 

ಪ್ರಕಾಶಕರು: 

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,

ಮಾನಸ ಗಂಗೋತ್ರಿ, ಮೈಸೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ