ಲಕ್ಷ್ಮಕವಿ ವಿರಚಿತ ರುಕ್ಮಾಂಗದ ಚರಿತ್ರ
ಶ್ರೀಹರಿಯ ಮಹಿಮೆಯನ್ನೂ ಏಕಾದಶೀವ್ರತದ ಮಹತ್ವವನ್ನೂ ವಿವರಿಸುವ ಈ ರುಕ್ಮಾಂಗದ ಚರಿತ್ರೆಯ ಕರ್ತೃ ಲಕ್ಷ್ಮ ಕವಿ. ಈತನಿಗೆ ಚತುರಘನ ಕುಶಲ ಲಕ್ಷ್ಮ, ಸತ್ಕುಲ ಸೂಕ್ಷ್ಮ ವರ ಕವಿಲಕ್ಷ್ಮ, ರಾಮಚಂದ್ರನುದರಾಬ್ಧಿ ಸುಜಾತ ಲಕ್ಷ್ಮೀಶ,ಕನ್ನಡ ಕವೀಂದ್ರಾಭರಣ ಲಕ್ಷ್ಮ, ವರಖಗಪುರದ ರಾಮಚಂದ್ರ ಲಕ್ಷ್ಮ ಎಂದು ಹೇಳಿಕೊಂಡಿದ್ದಾನೆ,
ಈ ಕವಿ ಶ್ರೀವೈಷ್ಣವ ಮತಾನುಯಾಯಿಯಾಗಿದ್ದು ರಾಮಾನುಜರ ವಿಶಿಷ್ಟಾದ್ವೈತ ಸಂಪ್ರದಾಯಕ್ಕೆ ಸೇರಿದವನು.ತಂದೆ ರಾಮಚಂದ್ರ. ಈತ ಪಂಡಿತರ ಸಮೂಹದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದನು. ಇವನ ಮಗನೇ ಪ್ರಸ್ತುತ ಗ್ರಂಥದ ಕವಿ ಲಕ್ಷ್ಮ. ಖಗಪುರದ ಚೆನ್ನಿಗರಾಯನೇ ಇವನ ಇಷ್ಟದೈವ.ಇವನು ಹೇಳಿರುವ ಖಗಪುರವು ಆನೆಕಲ್ಲಿಗೆ ಸಮೀಪದಲ್ಲಿರುವ ಹಾರಗದ್ದೆಯ ನಾಮಾಂತರ. ಅಲ್ಲಿರುವ ದೇವಾಲಯದ ದೇವರಾದ ಚೆನ್ನಿಗರಾಯ(ಚೆನ್ನಕೇಶವ) ನ ಅಂಕಿತದಲ್ಲಿ ತನ್ನ ಕೃತಿಗಳನ್ನು ರಚಿಸಿ ಆ ದೇವರಿಗೆ ಅರ್ಪಿಸಿದ್ದಾನೆ. ಈತನ ಮತ್ತೆರಡು ಕೃತಿಗಳೆಂದರೆ ಒಂದು ಭಾರತ ಮತ್ತೊಂದು ಚೆನ್ನನ ನೀತಿ ಕಂದ.
ಮೊದಲನೆಯ ಸಂಧಿ.
ಶ್ರೀಸಕಲಮುನಿಹೃದಯವಾಸವಂದಿತ ಜನಾ
ಧೀಶ ಕಾರುಣ್ಯ ಸರ್ವೇಶ ರವಿಕೋಟಿ ಸಂ
ಕಾಶ ತ್ರೈಲೋಕ್ಯಪ್ರಕಾಶ ವರ ಕೌಸ್ತುಭಸುಭೂಷ ಪರೆಪೂರ್ಣವೇಷ॥
ಭಾಸುರತರ ಪ್ರಬಲಶೇಷನಿಜತಳ್ಪ ಸುದಿ
ನೇಶವಿಧುನೇತ್ರ ಕಮಲೃಸನನ ಪಡೆದ ಸುವಿ
ಲಾಸ ಖಗಪುರ ಚೆನ್ನಕೇಶವನು ನಮಗೆ ಸಂತೋಷ ಸಂಪದವೀಯಲಿ॥೧॥
ಭಜಕಸಂರಕ್ಷ ಭಾಳೇಕ್ಷಣ ಮನೋಹರ
ತ್ರಿಜಗವಂದಿತ ಶಿವಾಪರ ಮಹೇಶ್ವರ ನಿತ್ಯ
ಗಜಚರ್ಮಧರ ಚಂದ್ರಜೂಟ ಗಂಗೇಶ ನಾರದ ನಮಿತ ಚರಣಯುಗಳ॥
ಅಜನ ಶಿರವಿಡಿದ ಘನವಡೆದ ಕಾಪಾಲಿಯಂ
ಗಜದಹನಭಸಿತ ಭಸ್ಮಾಂಗಹರ ನಿಜ ನಿರಾ
ಕಾರ ಶಂಕರ ಜಗನ್ಮಯನೆಮಗೆ ನಿಖಿಳ ಸೌಖ್ಯವನೀಯಲಿ॥೩ ॥
ಕರಚತುಷ್ಟಯ ದುರಿತಹರವಿಧಿ ಸುರೇಂದ್ರ ಶಂ
ಕರ ಭಜಿತ ವಿಮಲಚಾರಿತ್ರಭೂಲೋಕ ವಿ
ಸ್ತರ ಗಜಾನನ ಭಿನ್ನದಂತ ಲಂಬೋಧರ ಕುಠಾರಕರ ಭಯಸಂಹರ॥
ಹರುಷಾಂಬುನಿಧಿಯೆ ಸನ್ಮತಿಯನೀವುದು ಕೃತಿಯ
ವಿರಚಿಸುವೆನೆನ್ನ ಮನದೊಳು ನೆಲಸಿ ನವರಸ ಸು
ಭರಿತಮಪ್ಪಂತೆ ಕರುಣಿಸು ವಿನಾಯಕ ವಿಘ್ನವಿಲ್ಲದಂತತಿ ಶುಭದೊಳು॥೪॥
ಲಕ್ಷಣವಲಂಕಾರ ಶಬ್ಧ ಶಾಸ್ತ್ರಗಳಿಗ
ಧ್ಯಕ್ಷನಾನೆಂದಹಂಕಾರದಿಂ ಬೆರೆವನ
ಲ್ಲೀಕ್ಷಿಸಲು ಪರಮ ಯುಕ್ತಿಗಳ ರಸ ಭಾವನಿರ್ಣಯ ಚಮತ್ಕಾರಂಗಳ ॥
ಪಕ್ಷಿಪುರದರಸ ಕೃಪೆಯಿಂದ ವರವಿತ್ತೆನ್ನ
ರಕ್ಷಿಸಿ ಮಹಾಪುರಬಂಧವ ಪೇಳೆನಲ್ಕೆ ತಾ
ನಾಕ್ಷಣವೆ ಪೇಳ್ದೆ ಸುಜ್ಞಾನಿಗಳ್ ತಪ್ಪಿರಲ್ ತಿದ್ದಿ ನಿರ್ಣಯಮಾಳ್ಪುದು॥೬॥
ವ್ಯಾಸನಂಘ್ರಿಗೆ ಕಾಳಿದಾಸನಡಿಗಳ್ಗೆ ಸುವಿ
ಲಾಸದಿಂ ವಾಲ್ಮೀಕಿಮುನಿಯ ಚರಣಕ್ಕೆರಗಿ
ವಾಸುಗೀಂದ್ರನಿಗೆ ವಂದಿಸಿ ನಾರದಾದಿ ಮುನಿಮುಖ್ಯರ್ಗೆ ಸಾಷ್ಟಾಂಗದಿ ॥
ಮೀಸಲಳಿಯದ ಕಾವ್ಯಮಂ ರಸೋನ್ನತಮಾಗೆ
ವಾಸುದೇವಾರ್ಪಿತವೆನಲ್ ಪೇಳ್ವೆ ಶಾರದೆಯ ಬಲ್ಮೆಯಿಂ ನಲ್ಮೆಯಿಂದ॥೮॥
ನಿರತವರಿಷಡ್ವರ್ಗಮಂ ಮೆಟ್ಟಿಯೋಗ ನಿ
ರ್ಧರನೆನಿಪ ಯೋಗಿಬಲ್ಲಂತೆ ಪರಮಾತ್ಮನೆಂ
ದುರುತರದ ಸಂಸಾರಸಾಗರದೊಳೋಲಾಡಿ ಪಂಬಲಿಸುವವ ಬಲ್ಲನೆ ॥
ವರ ವಸಂತೋತ್ಸವದ ಸೊಂಪಿನಿಂಪಿನ ಸಮಯ
ದಿರವ ಕೋಗಿಲೆಗಳರಿವಂತೆ ಕಾಕಾಳಿ ತಾಂ
ಪರಿಕಿಪುದೆ ಸುಕವಿ ಸಂತೋಷಿವೊಲು ಕುಕವಿ ಸಂತಸಗೊಂಬನೇ ಕೃತಿಯನು॥೧೨॥
ಪದಬಂಧಮೆತಿ ಸಂಧಿಯನು ವೃತ್ತಿ ರೀತಿ ಗುಣ
ದುದಯ ಪೊಸಯುಕ್ತಿ ಮಾಧುರ್ಯ ವಾಕ್ ಪ್ರಚುರತೆಯೊ
ಳೊದವಿದಾನಂದರಸದಾವೇಶದಿಂದುರ್ಕಿ ಸೊಕ್ಕಿಮಿಕ್ಕಿರೆ ತಾನದ ॥
ಮಗರ್ವದಿಂದೊಪ್ಪದೀ ಯುಕ್ತಿಯೆಂಬವ ದಿ
ವದ ಘೂಕ ಕಾಣ್ಪುದೇ ಪಗಲ ಕಷ್ಟದ ನುಡಿಗ
ಳದ ನೆನವವನ ಮಾತದೇನೀ ಮಹಾಕಾವ್ಯಸೇವ್ಯಮಹುದೆಂದರಿವುದು॥೧೩॥
ದುರುಳರ್ ಕುಯುಕ್ತಿ ಮಂತ್ರಾಳೋಚನೆಗಳಿಂದ
ಶರಧಿಮಧ್ಯದಿ ಬಕನವೊಲ್ ಸುಧಾಂಶುವನು ತ
ನ್ನಿರವನರಿಯದೇ ಜರೆದಡಾ ಹಿಮಕರಗದೇ ಕುಂದು ನಿಂದ್ಯಂ ಬಪ್ಪುದೆ॥
ನರಿ ರಜತಗಿರಿಯ ಮೇಲ್ ಶಿವನೆನಿಪ ಪೆಸರ ತಾ
ಳ್ದಿರಲರಿದನೇ ರುದ್ರಕಲಶಾಬ್ಧಿಯೊಳ್ ಭೇಕ
ಹರಿಯೆನಲ್ ನರಹರಿಗೆ ಸರಿಯೆ ಮೇರುವಿಗೆ ತೃಣಮೊರೆಯೆ ಮೂಲೋಕವರಿಯೆ॥೧೮॥
ಸಿರಿಕೂರ್ತವಂಗಮಂಗಲವುಂಟೆ ತನಗೊಲಿದ
ತರುಣಿಗೆ ವಿವಾಹಮತ್ತುಂಟೆ ವಿಪಿನದಿ ಬೆಳೆದ
ಪರಿಮಳದ ಗಿಡಗಳ್ಗೆ ಪಂಕ್ತಿಶೋಭಿತವುಂಟೆ ಹರಿದಯ ವಿಶೇಷದಿಂದ ॥
ವಿರಚಿಸಿದ ಕೃತಿಗೆ ಲಕ್ಷಣವ ನಿರ್ಣಯಿಪರೆಂಶ
ಬರ ಮಾತು ಪುಸಿಯೆಂದು ಭಾವಿಪುದು ಬಲ್ಲವರ್
ವರಕವಿಗೆ ಯುಕ್ತಿ ಕವಿಗಜಗಜಾಂತರಗಳೆಂದರಿದು ನಿಶ್ಚಯಂಗೊಂಬುದು॥೧೯॥
ಭೂತಳಕೆ ದಕ್ಷಿಣ ಸುವೈಕುಂಠವೆನಿಸಿ ವಿ
ಖ್ಯಾತಿವಡೆದಿರ್ಪ ಖಗಪುರನಿವಾಸದೊಳು ತೋ
ರ್ಪಾತ ಬುಧಕುಲಶಿರೋಮಣಿಯಾದ ಕಾಶ್ಯಪಗೋತ್ರನಿರ್ಮಳಚರಿತ್ರ॥
ನೀತಿಸನ್ನುತ ರಾಮಚಂದ್ರನುದರಾಬ್ಧಿ ಸಂ
ಜಾತ ಲಕ್ಷ್ಮೀಶನೆಂಬವನು ವಿರಚಿಸಿದ ಖ
ದ್ಯೋತಕುಲತಿಲಕರುಕ್ಮಾಂಗದ ಚರಿತ್ರಮಂ ಕೇಳ್ದು ನಲಿವುದು ಸುಜನರು॥
ನಸುಬಿರಿದ ಕೆಂಜಾಜಿಗಳ ಕಂಪನುಂಡು ಸಂ
ತಸವುಕ್ಕಿ ಸೊಕ್ಕಿದೆಳೆ ದುಂಬಿಗಳ ಝೇಂಕಾರ
ವಿಸರದಂತಿಮ್ಮಾಮರಂಗಳನಡರ್ದು ನಳನಳಿಪ ಕೆಂದಳಿರ ಸವಿದು॥
ವಸಂತಕಾಲದೊಳ್ ನಲಿವ ಪೆಣ್ಗೋಗಿಲೆಯೊ
ಳೆಸೆವ ನುಣ್ದನಿಯಂತೆ ರಮಣೀಯಮಾಗಿ ರಂ
ಜಿಸುವುದೀ ಕರ್ನಾಟಕಕ್ಕತುಳ ವಿಸ್ತಾರ ಕಾಂತಿಯಿಂ ಕಾವ್ಯಸಾರ॥೨೬॥
ಸುಕವಿಗಳ ಸುಮ್ಮಾನ ಸುಜನರಿಗೆ ಸುಜ್ಞಾನ
ಮುಕುತಿಪಥ ಕುಶಲಕೋವಿದರ ಮನದೇಳ್ಗೆ ಹರಿ
ಭಕುತರಾನಂದಮಂದಿರ ಯೌವನಾಂಗಿಯರ ಸಿಂಗಾರದಾಸ್ಪದಮೆನೆ॥
ಸಕಲಜನ ಸೌಮ್ಯಸರಸಿಗಳ ಸಂತಸದೇವ
ನಿಕರಕಮೃತಪಾನ ಪಾಂಥರಶ್ರಮಶಾಲೆ
ಯಕಳಂಕಚರಿತ ಮನ್ಮಥಕೋಟಿ ಸಂಕಾಶ ಸರ್ವೇಶ್ವರನ ಸತ್ಕೃತಿ॥೨೯॥
ಮಾರ್ತಾಂಡಕುಲದ ಮಾಂಧಾತರಾಯನು ನಿಖಿಳ
ಪಾರ್ಥಿವಾನ್ವಯ ವಾರ್ಧಿಚಂದ್ರಸದ್ವ್ರತದೊಳಿ
ಷ್ಟಾರ್ಥಂಗಳನ್ನಿಹದೊಳಿತ್ತು ಪರದಲ್ಲಿ ಕೈವಲ್ಯಪದಮಂ ಕಾಣಿಪ॥
ಸ್ವಾರ್ಥಮಪ್ಪಂಥಾ ಚರಿತ್ರಮಂ ಪೇಳೆಂದು
ಪ್ರಾರ್ಥಿಸಿ ವಸಿಷ್ಠನಂ ಕೇಳ್ದಡಾ ಮುನಿ ಸಂಶ
ಯಾರ್ಥಮಿಲ್ಲದೆ ನಾರದಿಯಪುರಾಣದ ಕಥಾ ಭಿತ್ತಿಯಂ ವಿವರಿಸಿದನು॥೩೧॥
ಎಂದು ಮುನಿ ರುಕ್ಮಾಂಗದಾಖ್ಯಾನಮಂ ಮುದದಿ
ಮಾಂಧಾತನೃಪವರಗೆ ಪೇಳ್ದ ವೃತ್ತಾಂತಮಂ
ಮುಂದೆ ಮೋಕ್ಷದ ಪದವನೀವ ಸಿದ್ಧಾಂತಮಂ ವಿವಿಧ ದುರಿತಧ್ವಾಂತಮಂ॥
ಕೊಂದ ಮಂದಾನಂದಮೀವಸದ್ಭಾಗವತ
ವೃಂದದೊಳು ಸತ್ಪುಣ್ಯ ರೂಪಾಗಿ ತೋರುವ ಮು
ಕುಂದ ಸೇವಕನ ಚಾರಿತ್ರಮಂ ವರ್ಣಿಸಿದೆ ಕರ್ಮಕಲ್ಮಷವಿಲ್ಲದೆ ॥೩೩॥
ನಳನಿಂದಧಿಕ ಹರಿಶ್ಚಂದ್ರಗಿಂ ಮಿಗಿಲು ವೆ
ಗ್ಗಳನು ಪುರುಕುತ್ಸನಿಂ ಪುಣ್ಯಶೀಲಂ ಸುನಿ
ರ್ಮಳ ಪುರೂರವನಿಂದ ಸಗರರಾಜಂಗೆ ಸಾಸಿರಮಡಿ ವಿಶೇಷಯುತನು॥
ಇಳೆಯಾಳ್ದ ಕಾರ್ತಿವೀರ್ಯಂಗೆ ಬಲಿ ಶಿಬಿ ರಾಮ
ಸಲೆ ಖಚರಪತಿ ದಧೀಚಿಗೆ ದಿಳೀಪಂಗೆ ವೆ
ಗ್ಗಳನೆನಿಪನುಭಯ ಕುಲದರಸುವರ್ಗಂಗಳಿಂದತಿ ಪೂಜ್ಯನೆಂದೆನಿಪನು॥೩೫॥
ಇದನೇಕಚಿತ್ತದಿಂ ಭಯಭರಿತ ಭಕ್ತಿಯಿಂ
ಸದಮಲ ಜ್ಞಾನ ಸಂಪೂರ್ಣದಿಂದೊಲಿದು ಕೇ
ಳಿದವರ್ಗೆ ಇಹದೊಳತಿ ಸೌಖ್ಯಮಂ ಪರದಲ್ಲಿ ಘನಮುಕ್ತಿ ಸಂಪದವನು॥
ಮುದದಿಂದಲಿತ್ತಪಂ ಮೂಲೋಕ ರಕ್ಷ ದಶ
ವದನಸಂಹಾರಿ ಸಾಕ್ಷಾತ್ಪರಮಪುರುಷ ಸಿರಿ
ವದನ ಕಮಲಾರ್ಕ ಖಗಪುರವರಾಧೀಶ ಚನ್ನಿಗರಾಯ ನೀಲಕಾಯ॥೩೬॥
ಮೂರನೆಯ ಸಂಧಿ:
ಈ ಪರಿಯೊಳು ವಿಸ್ತರದಿಂದ ಸತ್ಕೀರ್ತಿ
ರೊಪೆನಿಪ ವೈದೇಶಿನಗರದಧಿನಾಥ ಸುಕ
ಲಾಪ ಮಾರ್ತಾಂಡ ಕುಲದೀಪ ಘನತರ ಸುಪ್ರತಾಪ ಧರ್ಮಸ್ವರೂಪ ॥
ಪಾಪನಿರ್ನಾಮ ಪರಬಲಭೀಮ ಋಷಿವರ
ದ್ವೀಪಪಾಲಕ ಪಾರ್ಥಿವಾಂಬುನಿಧಿಚಂದ್ರ ನಿ
ರ್ಲೇಪ ಹರಿಶರಣಚೂಡಾರತ್ನನೆನಿಪ ರುಕ್ಮಾಂಗದ ಮಹೀರಮಣನು॥೫೨॥
ನಿಖಿಲ ಭೂಪಾಲಕವರ್ಗರಂಜಿತರತ್ನ
ಮಕುಟಸೌರಂಭಷಟ್ಪದಯುತ ಪದಾಬ್ಜಯುಗ
ನಖಿಳ ಲೋಕವ್ಯಾಪ್ತ ವಿವಿಧವಿಕ್ರಮಶಾಲಿತ್ರಿಭುವನಕೆ ಭುಜಯೋನ್ನತ॥
ಮಕರಾಂಕ ಕೋಟಿವಿಸ್ತಾರ ರೂಪಾನಂತ
ಭಕತಜನಕುಲತಿಲಕ ಸತ್ಪುರುಷವರ್ಗನಿಂ
ದಕಜನಚ್ಛೇದ ಸತ್ಯವ್ರತಾಧೀಶಪ್ರಕಾಶ ಸದ್ಗುಣಕೋಶನು॥೫೩॥
ಶರಣೆನ್ನದಿರ್ಪ ನೃಪರಿಲ್ಲ ಸರಸತ್ವದಿಂ
ಬೆರಸದಿಹ ರಾಜಪುತ್ರರುಗಳಿಲ್ಲಾವಗಂ
ಹರಿಪೂಜೆ ವಿರಹಿತ ಜನರ್ಗಳೊಳ್ ಮೈತ್ರತ್ವಮಿಲ್ಲ ಮನದೊಳ್ ಸೋಲದ॥
ತರುಣೀಮಣಿಯರಿಲ್ಲವಾ ನೃಪನ ಬೇಡಿ ಮಿ
ಕ್ಕರ ಕೇಳ್ವ ಯಾಚಕರುಮಿಲ್ಲ ವೈರಂಗಳಿಂ
ದಿರುವ ದೊರೆಗಿರೆಗಳಿಲ್ಲಾ ರಾಯರೊಳ್ ಪೇಳ್ವುವುದೇನಧಿಕನೋ ಧರೆಯೊಳು॥೫೪॥
ಕೃತಯುಗಾಂತ್ಯದೊಳೇಳು ವಾರ್ಧಿ ಪರಿಯಂತ ಶಾ
ಶ್ವತಮಾದ ದೊರೆ ದೊರೆಗಳಂ ಗೆಲಿದು ಹರಿದಶ್ವ
ಸುತನ ಲೋಕವ ಪಾಳುಮಾಡಿ ಛಪ್ಪನ್ನದೇಶಾಧಿಪರ ರಣದಿ ಗೆಲಿದು॥
ಅತುಳವಿಕ್ರಮ ವಿನಯನೆಂದೆನಿಸಿ ವಿಪ್ರಸಂ
ತತಿಯ ಪಾಲಿಸಿ ಪರಶುಧರನಂತೆ ಸಾಹಸೋ
ನ್ನತ ನಿಷ್ಕಳಂಕನಿರ್ಭೀತ ಸದ್ಗುಣನೆನಿಸಿ ರಾಜಿಸಿದ ತಾನಿಳೆಯೊಳು॥೫೫॥
ಅವನ ಘನತರಸುಪ್ರತಾಪಸಂಧ್ಯಾರುಣಕೆ
ದಿವದೊಳಬ್ಜಂ ಭ್ರಮೆಗಳಂ ಮುಗಿವುತಭ್ರದೊಳ್
ದಿವಿಜಪತಿ ಗರುಡ ಗಂಧರ್ವ ಕಿಂಪುರುಷರತಿಭೀತಿಯಿಂ ತಮ್ಮ ಪೊಳಲ ॥
ರವಿಶಶಿಗಳಿಂದ ಕಾಯಿಸಿಕೊಂಬರದರಿನಿಂ
ತವೆ ಮೂರುಲೋಕದೊಳಗಿದಿರಿಲ್ಲ ತಾನಾಳ್ವ
ಭುವನದೊಳ್ ಸತ್ಯವಿರಹಿತಮಧರ್ಮಾಚಾರಮೆಂಬುದಂ ಪೊದ್ದಲೀಯಂ॥೫೬॥
ಅರಿಗಿರಿನಿಕರವಜ್ರ ನರಿ ಶರಭ ಭೇರುಂಡ
ನರವಾರ್ಧಿವಡಬ ಮತ್ತರಿಕರಿ ಮೃಗೇಂದ್ರನರ
ಹರಿಭಕ್ತಿಸಾಂದ್ರ ಬಲುವರಿ ಕುಮುದಚಂದ್ರಕುಲವರಿವಿಪಿನದಾವಾನಳ॥
ಅರಿಕಾಲ ಮೃತ್ಯುಮಿಗೆಯರಿಯುರಗ ಗರುಡ ನೆರೆ
ಯರಿಸದಾಗತಿ ಅರಿಮದನ ಹರಕೊಬ್ಬಿ
ದರಿಪೊಳ್ತು ರಾಹು ಸಲೆಯರಿಮೇಘ ವಾಯುವೆಂದೆನಿಪನಾ ಭೂಪಾಲನು॥೫೭॥
ಅರಿರಾಯರೆಂಬ ರತ್ನಾಕರದಿ ಮುಳುಗಿರ್ದ
ಧರೆಯನತಿ ಸತ್ವಾತಿಶಯದಿಂದ ಪೊಕ್ಕು ಸಂ
ಹರಿಸಿ ಸಪ್ತದ್ವೀಪಗಳನು ವಶವರ್ತಿಸಲ್ಕಾದಿ ವರಹವತಾರನೊ ॥
ನಿರುತ ವೈರಿಗಳ ವಕ್ಷಸ್ಥಳವ ಸೀಳ್ದು ಘರಿ
ಘರಿನೆ ಘರ್ಜಿಸುವ ಘನ ಸುಪ್ರತಾಪದೊಳುಗ್ರ
ನರಸಿಂಗನೆಂದೆನಲು ಸರ್ವತೋಮುಖನೆಂದೆನಿಸುವನು ಸಜ್ಜನಾಧೀಶ್ವರ॥೬೧॥
ಪಗಲುನೆಣೆವಕ್ಕಿಪದ್ಮಂಗಳಂ ಭ್ರಮರ ಕಾ
ರ್ಮುಗಿಲ ನವಿಲುಪವನವನನ್ಯಭೃತಮಿಂದುವಿನ
ಮಿಗೆ ಜೊನ್ನಮಂ ಚಕೋರಾಳಿ ರವೆಯಂ ಕಮಲ ಮಾನಸಸರೋವರವನು॥
ಸೊಗಸಂಚೆಯನುದಿನಂ ನೆನೆವಂತೆ ನೃಪತಿಲಕ
ಖಗಪುರಾಧೀಶನಂ ಧ್ಯಾನದೊಳ್ ನೆಲೆಗೊಳಿಸಿ
ಜಗದೆರೆಯ ರುಕ್ಮಾಂಗದಂ ಪದುಳಮಾಗಿ ರಾಜಿಸುವನವನೀತಳದೊಳು॥೬೩॥
ನಾಲ್ಕನೆಯ ಸಂಧಿ:
ಸೂಚನೆ:
ಹರಿಕುಲದರಸನ ಹರಿದಿನವಿಶೇಷವನಾತ
ನರಸಿಯ ಸುಚಾರಿತ್ರಮಂ ಕುವರನೇಳ್ಗೆಯಂ
ಧರೆಯನಾಳ್ದತಿ ಸತ್ಯಮಂ ವಿರಚಿಸುವೆನೆಂದು ಮುನಿ ನುಡಿದನಾ ನೃಪಂಗೆ॥
ಅಳಿಗುರುಳ ಕಳಕಳಿಪ ವದನಾಬ್ಜದಳನೇತ್ರ
ಗಳ ಥಳಥಳಿಪ ಕರ್ನಕುಂಡಲಕ್ಕದಿರುವ
ಲ್ಗಳ ಮಿರುಪ ಗಳದ ನಳಿತೋಳ್ಗಳನುರಸ್ಥಳದೊಳಳವಟ್ಟು ತೊಳವೆಳಗುವ ॥
ಪೊಳೆವ ವರ ಕೌಸ್ತುಭೋಜ್ವಲದಲಂಕಾರ ಸ
ಮ್ಮಿಳಿತ ರತ್ನಾಭರಣಗಳಲೆಸೆವ ಖರಪುರದ
ನಿಳೆಯ ಕಾರುಣ್ಯಮಂಗಳೆಯರಸ ಧಾರುಣೀವಲಯಮಂ ಪಾಲಿಸುವುದು॥೧॥
ಆ ನರೇಶ್ವರನ ಪ್ರೀಯದ ರಾಣಿಯೆನಿಪ ಸು
ಜ್ಞಾನ ಕೋವಿದೆ ನಿತ್ಯಶುಚಿಶೀಲೆ ಹರಿಪದ
ಧ್ಯಾನೆ ಸತ್ಯವ್ರತಾಚಾರೆ ಸಂಪೂರ್ಣೆ ಹಿಮಕರವದನೆ ಸೌಖ್ಯಸದನೆ॥
ಮಾನನಿಧಿ ಮಾನಿನಿ ಕುಲಶಿರೋಮಣಿ ಮಾಹಾನಿ
ದಾನೆ ಸಂಧ್ಯಾವಳಿಯೆನೆಪ್ಪ ಪೆಸರುಳ್ಳ ಸ
ನ್ಮಾನ್ಯೆ ವಂಶೋದ್ಧಾರೆ ಪರಮಪತಿಭಕ್ತೆ ಸುವಿಚಾರೆ ಸತ್ಕೀರ್ತಿ ಹಾರೆ॥೨॥
ಕಮಲನೇತ್ರಂಗೆ ಗೋಮಿನಿ ಕಮಲಜೂಟಂಗೆ
ಉಮೆ ಕಮಲಭವಗೆ ಶಾರದೆ ಶಚಿ ಸುರೇಂದ್ರಂಗೆ
ಕುಮುದಮಿತ್ರಂಗೆ ರೋಹಿಣಿ ನೆರೆ ವಸಿಷ್ಠಮುನಿವರಂಗರುಂಧತಿ ನಳಂಗೆ॥
ದಮಯಂತಿ ಋಷಿ ಕುಲೋತ್ತಮನೆನಿಸಿ ಮೆರೆವ ಗೌ
ತಮಗಹಲ್ಯಾದೇವಿಗವರೊಪ್ಪವಡೆದಂತೆ
ದ್ಯುಮಣಿಕುಲ ರುಕ್ಮಾಂಗದಗೆ ಸಂಧ್ಯಾವಳಿ ಸರಾಗದಿಂದೆಸೆದಳಂದು॥೪॥
ಇಂತು ದಂಪತಿಗಳ್ಗೆ ನಿತ್ಯಂ ಪರಮವಿಷ್ಣು
ಚಿಂತೆ ಹರಿಶರಣರೊಡನಾಟ ಸಾಲಿಗ್ರಾಮ
ಮುಂ ತವೆ ಸುಪೂಜೆಯುಪವಾಸರ ಮಹಾತ್ಮೆ ಮಾನ್ಯರಿಗೆ ವಂದನೆ ಇನಂಗೆ ॥
ಸಂತತ ನಮಸ್ಕಾರ ರಾಜಧರ್ಮಾಚಾರ
ಮಂ ತಳೆದು ಬಾಳುವರ್ ಪಾಡಿ ಪೊಗಳಿಸಿಕೊಂಬ
ರಂತಲ್ಲ ಬರಿದೆ ಭಾವಿಸಲು ಭೂಲೋಕದೊಳ್ ಬಣ್ಣಿಸಲ್ ಚೋದ್ಯಮಕ್ಕು॥೬॥
ಗಿರಿಜೆ ಹರನಿಗೆ ಶಕ್ತಿಪಾಣಿ ಮಂದರಧರೆಗೆ
ಸಿರಿಗೆ ಮನ್ಮಥ ಸರಿತ್ಪತಿಯುದರದಲಿ ಬೆಳ್ಗ
ದಿರ ಕಶ್ಯಪಂಗೆ ಬಿಸಿಗದಿರ ಪಲಗಣ್ಣಂಗೆ ನೆರೆ ರೂಪುಯುತ ಜಯಂತ॥
ಸ್ಥಿರಪುತ್ರರೆನಿಸಿ ಝಸವಡೆದಂತೆ ಇನವಂಶ
ಪರಿಕಲಿಸಲುರೆ ಕಲ್ಪಕುಜದಂತೆಯಾ ನೃಪಗೆ
ತರುಣಿ ಸಂಧ್ಯಾವಳಿಗೆ ಜನಿಸಿದನು ಸೃಷ್ಟಿಗಾಶ್ಚರ್ಯಮೆನೆ ಧರ್ಮಾಂಗದ॥೭॥
ರತಿಯ ರೂಪಿಂದಿರೆಯಸದೃಶಸೌಭಾಗ್ಯ ಪಾ
ರ್ವತಿಯ ಮಾಂಗಲ್ಯ ಇಂದ್ರಾಣಿಯ ಸುಭೋಗ ಸರ
ಸ್ವತಿಯ ಚತುರೋಕ್ತಿ ರೋಹಿಣಿಯ ಸತ್ಕಾಂತಿಯೆಂದೆನಿಸುತಿವಳಂಗದಲ್ಲಿ॥
ಅತಿಶಯದಿ ಬಂದು ನೆಲಸಿರಲು ಪೊನ್ವಸುರೆಯೊಳ್
ಪ್ರತಿಯಿಡಲ್ ಕೈಸರಳ ಕಾರೊಡಲ ಪೆರೆದಲೆಯ
ಶತಮುಖ ಬಿದಿ ಜೊನ್ನೊಡಲ ರೂಪೊಂದಾದಂತೆಯೆಸೆದನಾ ಧರ್ಮಾಂಗದ॥೮॥
ನಳನಳಿನ ಶರಕೂಬರನ ಜಯಂತನ ಪೂರ್ಣ
ಕಳೆದಳೆದವನ ಮಾಧವನ ರೂಪ ಪಡಿಯಿಡಲ್
ಪೊಳೆವ ಜವ್ವನ ಚೆಲ್ವ ರೂಪಾತಿಶಯ ಸಕಲ ಸನ್ಮಾನ ಸಲೆ ಸದ್ಗುಣ॥
ನಿಳೆಯ ಧರ್ಮಾಂಗದಗೆಣೆಯೆ ರಿಪು ನೃಪಕುವರ
ಕಲಭ ಪಂಚಾಸ್ಯವಿತರಣ ಪಾರಿಜಾತ ಮಂ
ಗಳ ಮಹೋನ್ನತ ಕೀರ್ತಿಹಾರ ವಿವಿಧ ವಿಚಾರ ಸುಕುಮಾರರಣಕೆ ಧೀರ॥೯॥
ಹೊಳೆಹೊಳೆವ ನೆರೆ ಮೋಹನಂಗಳಿಂ ಕಂಗಳಿಂ
ಥಳಥಳಿಪ ಪೂರ್ಣೇಂದುವಕ್ತ್ರದಿಂ ನೇತ್ರದಿಂ
ದೆಳೆಮೀಸೆ ಕುಡಿವರೆವ ರೇಖೆಯಿಂ ಜೋಕೆಯಿಂ ನಳಿತೋಳ ಸೊಬಗಿನಿಂದ॥
ಸಲೆ ಚಂಪಕಾಛಾಯಾದನುವಿನಿಂ ತನುವಿನಿಂ
ನಳಿನಪದಯುಗ್ಮದೊಂದಂದಿಂ ಚಂದದಿಂ
ಮಿಳಿರ್ವ ರತ್ನಾಭರಣಕಾಂತಿಯಿಂ ಶಾಂತಿಯಿಂದೆಸೆದನಾ ರಿಜಕುವರ॥೧೦॥
ವಿನಯ ಮಧುರೋಕ್ತಿ ಕಡುಜಾಣ್ಮೆಗಳ್ ಕುವರನ ವ
ಚನದಲ್ಲಿ ನೆಲಸಿತಗಣಿತ ಕಾಂತಿ ದಿವ್ಯಮಾ
ನನದೊಳತಿಕರುಣ ದಯ ದಾಕ್ಷಿಣ್ಯ ಸನ್ಮಾನ ಸುಜ್ಞಾನ ಪಾತ್ರಂಗಳು॥
ಮನದೊಳುನ್ನತ ಸತ್ವ ಶೌರ್ಯ ಸಾಮರ್ಥ್ಯಗಳ್
ಘನ ಭುಜಾದಂಡದೊಳ್ ತೋರ್ಪಟ್ಟು ಗರುಡವಾ
ಹನನ ನೆನಹಿನ ಬಲ್ಮೆಯೊಳ್ ವಿಜಯನಾಗಿ ಶೋಭಿಸುವನವನೀತಳದೊಳು॥೧೧॥
ಪದಿನಾರು ವತ್ಸರದೊಳುದಧಿ ಪರಿವಳಯದೊಳ
ಗಧಿಕ ಮನ್ನೆಯರ ರಣರಂಗದೊಳ್ ಗೆಲಿದು ಸಂ
ಪದಮೆಲ್ಲಮಂ ಸೂರೆಗೊಂಡು ಮರೆಯೊಕ್ಕರಂ ಮನ್ನಿಸಿ ಸುಮಾರ್ಗದಿಂದ ॥
ಮದನನಯ್ಯನ ಭಜಿಸಿಯಂತಕನ ದೂತರಂ
ಸದೆಬಡಿವುದಂಜಬೇಡೆಂದಭಯವಿತ್ತು ಸ
ನ್ಮುದನೆನಿಸಿದಂ ಸುರರ್ ಪೊಗಳೆ ಪಿತಮಾತೆಯರ್ಗಾನಂದಮಂ ಬೀರುತ॥೧೪॥
ಮಾಂಧಾತನೃಪತಿ ಕೇಳಾ ನೃಪನ ಕೀರ್ತಿಯಂ
ಕಂದರ್ಪನಗ್ರಜಂ ಕೈಲಾಸಗಿರಿಗೆ ಸರಿ
ಯೆಂದು ತೂಗಲ್ ನಗಂ ತಗ್ಗಲಾ ಗೋಪತಿಯ ನಿಲಿಸಿ ಶೂಲಿಯನೇರಿಸಿ॥
ದಂದಶೂಕೇಂದ್ರನಂ ತೊಡಿಸಿ ಸುರನದಿಯನಾ
ನಂದದಿಂ ಪೊರಿಸಿ ತಾರಾಧೀಶನಂ ಮಕುಟ
ಮಂದಿರಕ್ಕಸುಗೊಳಿಸಿದನದೆಂಬೊಲಾದುದಾ ನೆಲನೆರೆಯದೆಸಕಮೆಂತೊ॥೧೫॥
ಈ ವಿಧದೊಳುನ್ನತ ಶ್ರೀವರನ ಭಕ್ತಿಯೊಳ್
ಭಾವಶುದ್ಧಿಯಲಿ ಪಿತ ಮಾತೆ ಸುತರೊಂದಾಗಿ
ತಾವಾಳ್ವದೇಶದೊಳ್ ದಶಮಿ ಏಕಾದಶಿ ದ್ವಾದಶಿ ಕಟ್ಟಳೆಗಳ॥
ನಾವನುಲ್ಲಂಘಿಸಿದಡವನ ಶಿಕ್ಷಿಸಿ ಗೋಮಿ
ನೀವಲ್ಲಭಾಚ್ಯುತ ಮುಕುಂದ ಕೇಶವ ಕೃಷ್ಣ
ದೇವ ದೇವೀಶನಂ ಹೃತ್ಕಮಲದೊಳ್ ನಿಲಿಸಿ ಭುವನಮಂ ಪಾಲಿಸುವರು॥೧೬॥
ತುರುಗೆವೆಯ ತೋರಮುತ್ತಿನಹಾರಮೆಸೆಯಲೆಳೆ
ವೆರೆ ನೊಸಲಕತ್ತುರಿಯ ಪೆರ್ಮೊಲೆಯ ರಾಜಿಸುವ
ಪೊರವಾರನೊಚ್ಚಾರೆ ನೇತ್ರಗಳ ನಿರಿಗುರುಳ್ಗಳ ನೋಟ ಬೇಟಂಗಳ॥
ಕರಿಗಮನದಂಗನೆಯರೆಲ್ಲಿ ನೋಡಿದಡಲ್ಲಿ
ಸರಗೈದು ವೀಣೆ ಕಿನ್ನರಿ ದಂಡಿಗೆಗಳನಾ
ದರದಿಂದ ಪಿಡಿದು ಪರಮಾನಂದದಿಂ ಪಾಡಲಾ ನಾಡಸಿರಿ ಮೆರೆದುದು॥೨೫॥
ಇಂತು ಸಂತಸದೊಳ್ ದಿಗಂತ ವಿಶ್ರಾಂತ ಪರಿ
ಯಂತ ನಿಶ್ಚಿಂತೆಯಿಂದಂ ತಳೆದು ಸಾಮ್ರಾಜ್ಯ
ಮಂ ತರಣಿಕುಲತಿಲಕ ರುಕ್ಮಾಂಗದಂ ಪಾಲಿಪನ್ನಖಿಳ ತಿಂಥಿಣಿಪ ವೀರರ್ಕಳಿಂ॥
ಚಿಂತೆ ವಿಷ್ಣುವಿನ ಮೇಲಾಂತ ಧರನೊಳ್ ಕಲಹ
ಮುಂತಲ್ಲಿ ತುರಗ ರೇವಂತ ಸತ್ಕೀರ್ತಿಗೇ
ಕಾಂತ ರುಕ್ಮಾಂಗದನದೆಂತುರೆ ಕೃತಾರ್ಥನೊ ಪಿಂತಾಳ್ದ ಭೂವರರೊಳು॥೨೭॥
ನುಡಿನುಡಿಗೆ ನಾರಾಯಣಾಚ್ಯುತ ಮುಕುಂದ ಪೊ
ನ್ನೊಡಲನಂ ಕುಡುವಿಲ್ಲನಂ ಪಡೆದ ದೇವಯಿಂ
ಗಡಲಕುವರಿಯ ಮುಖಾಂಬೋಜ ಮಾರ್ತಾಂಡ ನಿಖಿಲಾಂಡ ಮೂಲಾಧಾರನ॥
ಬಿಡಬಿಡದೆ ನೆನೆದು ಸಲೆ ಸಡಗರದಿ ವಿಹಗಪುರ
ದೊಡೆಯನಂ ಧ್ಯಾನಿಸುತ್ತಡಿಗಡಿಗೆ ಸತ್ಯದೊಳ್
ಪೊಡವೀಶನಿರ್ದನಮರರ್ ಪೊಗಳಲತಿ ಸೌಖ್ಯವಡೆವುತವನೀತಳದೊಳು॥೨೯॥
ಏಳನೆಯ ಸಂಧಿ:
ಸೂಚನೆ:
ಭೂವರನ ಹರಿದಿನೋತ್ಸವವ ಕಂಡುರೆ ಕಪಟ
ಭಾವದಿಂದವನುಚಿತ ರಚನೆಯಂ ಕೈಕೊಂಡು
ದೇವಮುನಿ ಸರಿದನಂತಕನಗರಿಗಾಗಮಾಂಧಾತ ಕೇಳ್ ಕೌತುಕವನು॥
ಪದಿನಾರುಸಾವಿರ ಸ್ತ್ರೀಯರನದೇಂ ತಾಳ್ದ
ಮಧುಸೂದನಂ ಪರೀಕ್ಷಿಪೆನೆಂದು ಮಾರಹರ
ಸದನಮಂ ಭಿಕ್ಷಾಟಣಕ್ಕೆಂದು ಹೋಗಿ ಹರಿರುಕ್ಮಿಣಿಯರಂ ಕಾಣಲು॥
ಮದನಪಿತನೇನೆನಲ್ ಎನಗೋರ್ವಳನ್ನೀಯೆ
ಬದುಕುವೆನೆನಲ್ ಇತ್ತೆನೊಯ್ಯನೆನಲ್ ಪೋಗೆ ವಿ
ಶ್ವದ ಮೂರ್ತಿಗಳ ತೋರಿ ಹರನ ನಾಂಚಿಸಿದ ಖಗಪುರದರಸ ಪಾಲಿಸುವುದು॥೧॥
ಘಾಟದಿಂದಾ ಪುರದ ವೀದಿವೀದಿಗಳೊಳು
ಬ್ಬಾಟದಿಂದಖಿಳ ವಾದ್ಯಂಗಳಾರ್ಭಟೆಗಳಿಂ
ಕೋಟಿಸಂಖ್ಯೆಯ ಚರರ್ ಸಾರುತೈತಂರಖಿಳಾಂಡಂಗಳೊಡೆವಂದಿ॥
ಮೀಟೆನಿಪವರ ದೇವ ಮುನಿನಾಥನಿಗೆ ಕರ್ಣ
ಕೋಟರಂ ಬಿರಿಯಲತಿ ಕುಹಕ ಬೀಜಾಂಕುರಂ
ನಾಟಿ ಮಾಯಾ ವಿಚಿತ್ರದಿ ನಿಲ್ಲದರಘಳಿಗೆ ಕೊಂಡಾಡಿದಂ ನೃಪತಿಯ॥೬॥
ಖಳರಿಗದೃಢರಿಂಗೆಯಾಚಾರಹೀನರೀ
ಕಳವನೃತಕಳುಕದರಿಗತಿ ಗರ್ವಿತರಿಗೆ ಮನ
ನಳಿನನಾಭನ ದಿನಂ ಹಿತಮೆನಿಸದೆಚ್ಚರಿರಲಂತರಂಗದಿ ಕರ್ಮವ ॥
ತಳೆದಿರೆ ಸನ್ಮಾರ್ಗಮಂ ಪೇಳ್ವರಂ ಬೀರು
ತೆಳತಂದು ಗಜದಡಿಗಳಿಂ ತುಳಿಸವೇಳ್ಕೆಂಬ
ಕಳಕಳಂ ಕೇಳಲಾಯ್ತಾ ಮಹಾ ಸಭೆಗೆ ಮುನಿಜನಕೆ ಬೆರಗಂ ಬೀರುತ॥೯॥
ಪಸಿವು ತೃಷೆ ವ್ಯಸನ ನಿದ್ರೆಗೆ ಮನಂಗೊಡದೆ ನಿ
ಟ್ಟುಸುರೆನ್ನದನ್ಯತ್ರ ಚಿಂತೆಯಂ ಭಾವಿಸದೆ
ಎಸೆವ ತ್ರಿಕರಣಶುದ್ಧನಿರ್ಮಲ ಸರಾಗದೊಳ್ ಹರಿಯ ಲೀಲಾಚರಿತದಿ ॥
ದಶಮಿ ಏಕಾದಶಿ ದ್ವಾದಶಿ ಪೊತ್ತು ಸಂ
ತಸದಿಂದ ಕಳೆದು ಕಾಲನ ಟೊಣದು ಕೈವಲ್ಯ
ವಸತಿಗಧಿನಾಥನಾಗೆಂದು ಸಾರಿದರುಲಿದು ತಂಡತಂಡಗಳಿಂದ॥೧೦॥
ಕಾಶಿ ಕೇದಾರ ಗೌತಮಿ ಗಂಗೆ ಗಯೆ ವಾರ
ಣಾಸಿಯುರಗಾದ್ರಿ ತಿರುಕಂಚಿ ತಿರುನಗರಿ ಪ್ರ
ಕಾಶವೆತ್ತಿಹ ಕುಂಭಕೋಣ ಶ್ರೀರಂಗ ಮೊದಲಾದ ಪುಣ್ಯಕ್ಷೇತ್ರದಿ ॥
ಬೇಸರದೆ ಚರಿಸಲೇಕೀ ಜನಾರ್ದನನ ಹರಿ
ವಾಸರವ ಪಕ್ಷಪಕ್ಷಂ ತಪ್ಪದಿರ್ದಡಾ
ವಾಸುದೇವಂಗರ್ಪಿತಗಳಪ್ಪುದಷ್ಟಾಂಗಯೋಗ ಜಪತಪಗಳಿದಿರೆ॥೧೧॥
ಪಶು ಭೂಸುರ ಸ್ತ್ರೀಯರೆಸೆವಶ್ವ ಶಿಶುಗಳಂ
ಸಸಿಯೊಳಿರಿದರ್ಗೆ ಮೊದಲಾಗಿಯನ್ನಂಗಳೊಳು
ವಿಷವನಿಟ್ಟವರ್ಗೆ ಪರಸತಿಗಮನಮಂ ಮಾಡಿದವರಿಗೇ ದಿನದಿನದೊಳು॥
ಪೊಸತಾದಸತ್ಯದೊಳ್ ಗುರುನಿಂದ್ಯಕಂ ಕೇಳ್ದ
ದಶಮಿ ಏಕಾದಶಿ ದ್ವಾದಶಿಯ ನಿಷ್ಠೆಯಿಂ
ದೆಸೆಗಲಿನನುದಯಮಂ ಕಂಡ ತಿಮಿರಂಗಳಂತೋಡುವುದು ಪಾಪಂಗಳು॥೧೨॥
ಮಾತಾ ಪಿತೃಗಳನುಲ್ಲಂಘಿಸಿದಡಂಗೆ ಕಡು
ಕಾತುರದ ಲಂಪಟದೊಳುಂ ತೊಳಲಿದಂಗೆ ಸಟೆ
ವಾತ ನುಡಿದುತ್ತಮರ ಪಳಿವಂಗೆ ಪರವಿತ್ತಗಳನಪರಿಹರಿಸಿದಂಗೆ॥
ಜಾತಿಯನ್ನುಳಿದವಗೆ ಜಾರತ್ವದೊಳ್ ಚರಿಪ
ನೀತಂಗೆಯೊಂದುದಿನ ಹರಿದಿನವನಾಚರಿಸೆ
ಪಾತಕಾಂಬುಧಿಯ ಸರ್ರನೆ ಪೀರ್ವುದಂದಗಸ್ತ್ಯನವೊಲರಿವುದು ಮನುಜರು॥ ೧೩॥
ಭೂನಾಥ ಕೇಳ್ ಬಳಿಕ ರುಕ್ಮಾಂಗದಂ ಮನದಿ
ಶ್ರೀನಾಥನಂಘ್ರಿಯಂ ನೆನೆದುದಯಕಾಲದೊಳ್
ಭಾನುವಿಂಗೆರಗಿ ನಿಜ ನಿತ್ಯಕರ್ಮಂಗಳಂ ನಾನಾ ವಿಧೋಕ್ತಿಯಿಂದ॥
ದಾನ ಧರ್ಮಂಗಳಂ ಮಾಡಿ ಸಂಪದದ ಸು
ಮ್ಮಾನದೊಳ್ ಹರಿದಿನೋತ್ಸವಮೆಂದು ಡಂಗುರವ
ತಾನಾಳ್ವ ದೇಶದೊಳ್ ಪೊಯ್ಸಿದನದೇಂ ವಣ್ಣಿಸುವೆನಂದಿನುತ್ಸವವನು॥೨೧॥
ಅನಿತರೊಳ್ ಪಗಲಾಣ್ಮನಪರದಿಕ್ಕಂ ಪಾರೆ
ತನತನಗೆ ವಿಹಗಸಂಕುಲಂ ಪಕ್ಕೆಗಳ ಸಾರೆ
ವನಜನಿಕರಕ್ಕೆ ವಿಭ್ರಮವ ಬೀರೆ ನಕ್ಷತ್ರವಭ್ರಮಂಡಲದಿ ತೋರೆ॥
ಘನ ಸಾಂದ್ರದೊಳ್ ತಮಂ ಜಗಮೆಲ್ಲಮಂ ಹೀರೆ
ವನಿತೆಯರ ಕುಚಗಳುರುಬೆಗೆ ಪಂಚಶರಹಾರೆ
ಮಿಗುತಿಹ ಯುಗಳವಕ್ಕಿಗೆ ಚಿಂತೆ ಮುನ್ನೂರೆ ಕಮಲಬಾಂಧವನಿಳಿದನು॥೨೬॥
ಅಂಜನ ದಿಶಾವ್ಯಾಧನರ್ಥಿಯಿಂ ತೊಟ್ಟೆಸೆವ
ಗುಂಜಾಫಲಂಗಳೋ ಪಶ್ಚಿಮಾಂಗನೆಯುಟ್ಟು
ರಂಜಿಸುವ ಮಾದಳದ ಸೀರೆಯೋ ಪಡುವಣಾಂಬುಧಿಯ ಪವಳದ ಬಳ್ಳಿಯೊ॥
ಕಂಜಬಾಂಧವನ ಶಿಖಿಯೆಂಬ ಸುರೆಬಾಯ್ದೆಗೆದು
ಭುಂಜಿಸುವೆನೆನಲು ಪಲ್ಗಳೊಳು ಸೂಸುವ ಕಿಡಿಯೊ
ಸಂಜೆಗೆಂಪೆಸಕಮೋ ಪೇಳೆನಲ್ಕಿಳಿದುದತುಳೋತ್ಕರುಷಮಂ ಬೀರುತ॥ ೨೭॥
ಅಂದುರೆ ವಿಶೇಷತರದಿಂ ಕತ್ತಲೆಯ ಸ
ದ್ವೃಂದ ತೆಕ್ಕನೆ ತೀವಿದಂದಮೆಸೆಯಲ್ಕೆ ವರ
ಮಂದರದ ನಿಳಯಕೆಂದಂದು ಸಂಭ್ರಮದಿ ನಡೆತಂದು ಜಾಗರದೊಳಿರ್ದು॥
ಸಂದ ಸಂತೋಷದಿಂದಾ ಭೂಪನಿರೆ ಕಮಲ
ಬಂಧುಮುದಯಿಸಲಾ ಮುಕುಂದಪದಜನಿತ ನದಿ
ಗಂದದಿಂದೈದುತಾನಂದದೊಳ್ ಮಿಂದು ಗೋವಿಂದನಂ ಧ್ಯಾನಿಸಿದನು॥೨೯॥
ಆ ಸಮಯದೊಳ್ ಪುರೋಹಿತರೈದಿ ಬಂದು ಭೂ
ಮೀಶ ಕೇಳರೆ ದ್ವಾದಶಿಯೆನಲ್ಕೆ ಸುವಿ
ಲೃಸದಿಂದೈದಿ ಭೂಸುರ ಜನರ್ಗಖಿಳ ದಾನಂಗಳಂ ಮಾಡಿ ಮುದದಿ॥
ಸೂಸುವಾನಂದದೊಳ್ ಸಕಲ ಜನರಿಂದ ಸಂ
ತೋಷದಿಂದಾರೋಗಣೆಯ ಮಾಡಿ ಖಗಪುರದ
ಕೇಶವನ ಲೀಲಾವಿಚಿತ್ರದಿಂದಂ ಪೊತ್ತುಗಳೆದಿರ್ದನಾ ಭೂವರ॥೩೦॥
ನೆನಕೆ :
ಕರ್ತೃ: ಲಕ್ಷ್ಮ ಕವಿ,
ಸಂಪಾದಕರು:
ಕೆ. ಆರ್. ಶೇಷಗಿರಿ,
ಪ್ರಕಾಶಕರು:
ಕನ್ನಡ ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾನಿಲಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ